ನಾಳೆ ಮೈಸೂರು ಅರಮನೆಯಲ್ಲಿ ನಾಗರಿಕ ರಕ್ಷಣೆ ಮಾಕ್‌ ಡ್ರಿಲ್

mysore palace
Published on

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ನಾಗರಿಕ ರಕ್ಷಣೆ ಕುರಿತು ಕಲ್ಪಿತ ತಾಲೀಮು ಮೇ 10ರಂದು ಸಂಜೆ 4ಕ್ಕೆ ನಡೆಯಲಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಸಿವಿಲ್ ಡಿಫೆನ್ಸ್ ಮಾಕ್‌ಡ್ರಿಲ್ ಕೈಗೊಳ್ಳಲಾಗುತ್ತಿದೆ.

ನಾಗರಿಕ ರಕ್ಷಣೆ ಕುರಿತು ಕಲ್ಪಿತ ತಾಲೀಮು ಅರಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲೀಮಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ತಾಲೀಮು ವ್ಯವಸ್ಥಿತವಾಗಿ ಮಾಡಬೇಕು. ಇದಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ವ್ಯವಸ್ಥೆ ಮಾಡಬೇಕು. ಅಗತ್ಯ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಅರಮನೆ ಆವರಣದಲ್ಲಿ ಕಲ್ಪಿತ ತಾಲೀಮು ಮಾಡಲು ಸೂಕ್ತ ಸ್ಥಳ ಗುರುತಿಸಿಕೊಳ್ಳಬೇಕು. ಎಲ್ಲ ರೀತಿಯ ವ್ಯವಸ್ಥೆ, ಕಂಟ್ರೋಲ್ ರೂಂ, ತುರ್ತು ಅಗ್ನಿಶಾಮಕ ದಳ, ಹಾಸ್ಪಿಟಲ್ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಇರಬೇಕು ಎಂದು ಸೂಚಿಸಿದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮೈಸೂರು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಡಿಸಿಪಿ ಮುತ್ತುರಾಜ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net