

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ದೃಷ್ಟಿಯಿಂದ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ದೋಸ್ತಿ ಪಾದಯಾತ್ರೆ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಮೈಸೂರಿನಲ್ಲಿ ಬೃಹತ್ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ತಾರಾ ಚಂದನ್ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರವಾದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇದನ್ನು ಸಹಿಸದೆ ಅವರ ತೇಜೋವಧೆ ಮಾಡಲು ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳು ಪಾದಯಾತ್ರೆ ಹೊರಟಿವೆ. ಇದನ್ನು ವಿರೋಧಿಸಿ ಆ.9ರ ಶುಕ್ರವಾರ ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹಾಸನ ಜಿಲ್ಲೆಯಿಂದ 8ರಿಂದ 10 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾಮಾಜಿಕ ಕಾರ್ಯಕರ್ತ ಅಬ್ರಾಹಿಂ ಎಂಬ ವ್ಯಕ್ತಿ ರಾಜ್ಯಪಾಲರಿಗೆ ದೂರು ನೀಡಿದ ತಕ್ಷಣವೇ ಅವರು ನೋಟಿಸ್ ನೀಡಿರುವುದು ಸರಿಯಲ್ಲ. ಈಗಾಗಲೇ ಅಬ್ರಾಹಿಂಗೆ ಸುಪ್ರೀಂ ಕೋರ್ಟ್ ಈ ಹಿಂದಿನ ಪ್ರಕರಣದಲ್ಲಿ 25 ಲಕ್ಷ ರೂ. ದಂಡ ವಿಧಿಸಿದೆ. ಆತ ನೀಡಿದ ದೂರಿನ ಮೇರೆಗೆ ರಾಜ್ಯಪಾಲರು ನೋಟಿಸ್ ನೀಡಿರುವುದು ಖಂಡನೀಯ. ತಕ್ಷಣವೇ ಆ ನೋಟಿಸ್ ಅನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯಪಾಲರ ಅಂಗಳದಲ್ಲಿ ಈಗಾಗಲೇ ದೂರುಗಳ ಸಾಕಷ್ಟು ಇದ್ದರೂ ಕೂಡ ಅವುಗಳಿಗೆ ನೋಟಿಸ್ ನೀಡಿಲ್ಲ. ಆದರೆ ಸಿದ್ದರಾಮಯ್ಯ ಅವರ ಮೇಲೆ ಆಪಾದನೆ ತರುವ ದೃಷ್ಟಿಯಿಂದ ಈ ರೀತಿ ಕೆಲಸಗಳಾಗುತ್ತಿವೆ. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ನಡೆಸುತ್ತಿವೆ. ಇದಕ್ಕೆ ರಾಜ್ಯಪಾಲರು ಸ್ಪಂದಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ಈ ನೋಟಿಸ್ ಅನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಮೀಲಾ, ವಸಂತ್ ಕುಮಾರಿ ಇತರರಿದ್ದರು.