

ಹಾಸನ: ಕಾಂಗ್ರೆಸ್ ಭ್ರಷ್ಟಾಚಾರ ಖಂಡಿಸಿ, ಮುಡಾ ಹಗರಣದ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಆ.10 ರಂದು ಮೈಸೂರಿನಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಹಾಸನದಿಂದ 10-15 ಸಾವಿರ ಮಂದಿ ಭಾಗಿಯಾಗಲಿದ್ದೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ತಿಳಿಸಿದರು.
ಆ.3 ರಿಂದ ಆರಂಭವಾದ ಉಭಯ ಪಕ್ಷಗಳ ಜಂಟಿ ಪಾದಯಾತ್ರೆ ಇಂದು ಸಂಜೆ ವೇಳೆಗೆ ಸಾಂಸ್ಕೃತಿಕ ನಗರಿ ತಲುಪಲಿದೆ.ಮಹಾರಾಜ ಕಾಲೇಜು ಮೈದಾದನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಸಭೆಯಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎರಡೂ ಪಕ್ಷಗಳ ಕೇಂದ್ರ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಸದಸ್ಯರು ಭಾಗಿಯಾಗಿ ಸಮಾವೇಶ ಯಶಸ್ವಿಗೊಳಿಸುವಂತೆ ಮನವಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯಲ್ಲಿ ಬಂದವರು ಅವರ ಇಮೇಜ್‌ಗೆ ಕಳಂಕ ಬರುವ ರೀತಿ ನಡೆದುಕೊಂಡಿದ್ದಾರೆ. ಒಳಗೊಂದು,ಹೊರಗೊಂದು ರಾಜಕೀಯ ಮಾಡುತ್ತಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯಪಾಲರು ಕೂಡಲೇ ರಾಜೀನಾಮೆ ಪಡೆಯಬೇಕು ಎಂದು ಮನವಿ ಮಾಡಿದರು.
ವಿಳಂಬಕ್ಕೆ ಅಸಮಾಧಾನ:
ಒಂದು ವರ್ಷದ ನಂತರ ಹಾಸನ ಸೇರಿದಂತೆ ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮೀಸಲು ನಿಗದಿ ಮಾಡಲು ಸರ್ಕಾರ ವಿಳಂಬ ಮಾಡುವ ಮೂಲಕ ಜನಪ್ರತಿನಿಧಿಗಳು ಹಕ್ಕು ಮೊಟಕುಗೊಳಿಸಿದೆ ಎಂದು ಲಿಂಗೇಶ್ ಅಸಮಾಧಾನ ಹೊರ ಹಾಕಿದರು. ವಿಳಂಬವಾಗಿಯಾದರೂ ಮೀಸಲು ನಿಗದಿ ಮಾಡಿದ್ದಾರೆ. ಹಾಸನ, ಅರಸೀಕೆರೆ ನಗರಸಭೆ ಸೇರಿದಂತೆ ಜಿಲ್ಲೆಯ ಎಂಟೂ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು
ಆ.14-15 ರಂದು ಸಭೆ:
ಹಾಸನ ನಗರಸಭೆ ಚುನಾವಣೆ ಸಂಬಂಧ ಆ.14 ರಂದು ಮಧ್ಯಾಹ್ನ ಪ್ರವಾಸಿ ಮಂದಿರದಲ್ಲಿ ಸಭೆ ನನ್ನ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಎಲ್ಲರೊಂದಿಗೂ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದ ಅವರು, ಆ.15 ರಂದು ಬೆಳಗ್ಗೆ ಅರಸೀಕೆರೆ ಪ್ರವಾಸಿ ಮಂದಿರದಲ್ಲಿ ಸಭೆ ನಡೆಯಲಿದೆ ಎಂದರು.
ಇದೇ ವೇಳೆ ನಮ್ಮ ಪಕ್ಷದ ಚಿಹ್ನೆಯಡಿ ಗೆದ್ದವರು, ನಾವು ಹಾಕುವ ಅಧಿಕೃತ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಎಲ್ಲೆಡೆ ವಿಪ್ ಜಾರಿ ಮಾಡುತ್ತೇವೆ. ಉಲ್ಲಂಘಿಸಿದರೆ ಕಾನೂನು ಕ್ರಮದ ಜೊತೆಗೆ ಸದಸ್ಯತ್ವ ರದ್ದತಿಗಾಗಿ ಕೋರ್ಟ್ ಮೊರೆ ಹೋಗುವುದಾಗಿ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಬಾಣಾವರ ಅಶೋಕ್, ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಅರಸೀಕೆರೆ ಅಧ್ಯಕ್ಷ ಚಂದ್ರಶೇಖರ, ಹಾಸನ ಅಧ್ಯಕ್ಷ ಎಸ್.ದ್ಯಾವೇಗೌಡ ಮತ್ತು ಬೇಲೂರು ಅಧ್ಯಕ್ಷ ಲೋಕೇಗೌಡ ಇದ್ದರು.