ಮಡಿಕೇರಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಸಂಬಂಧ ಅ.27, 28 ರಂದು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮೃತ್ತಿಕೆ ಸಂಗ್ರಹಣೆ ಮಾಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 27 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಂದ ಪವಿತ್ರ ಮೃತ್ತಿಕೆ ಸಂಗ್ರಹಣೆಗೆ ಚಾಲನೆ ದೊರೆಯಲಿದೆ. ಬಳಿಕ ಗಾಳಿಬೀಡು, ಕೆ.ನೀಡುಗಣೆ, ಮೇಕೇರಿ, ಹಾಕತ್ತೂರು, ಹೊಸ್ಕೇರಿ, ಮರಗೋಡು, ಕಾಂತೂರು ಮೂರ್ನಾಡು, ಹೊದ್ದೂರು, ನಾಪೋಕ್ಲು, ಕೊಣಂಜಗೇರಿ, ನರಿಯಂದಡ, ಕಕ್ಕಬ್ಬೆ, ಎಮ್ಮೆಮಾಡು, ಬಲ್ಲಮಾವಟಿ, ಅಯ್ಯಂಗೆರಿಯಲ್ಲಿ ನಡೆಯಲಿದೆ.
28 ರಂದು ಬೆಟ್ಟಗೇರಿ, ಬೇಂಗೂರು, ಕುಂದಚೇರಿ, ಭಾಗಮಂಡಲ, ಕರಿಕೆ, ಪೆರಾಜೆ, ಚೆಂಬು, ಸಂಪಾಜೆ, ಮದೆ, ಕಡಗದಾಳು, ಮಕ್ಕಂದೂರು ಗ್ರಾಮ ಪಂಚಾಯಿತಿಗಳಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹಣೆ ನಡೆಯಲಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಪ್ರಮುಖರೊಂದಿಗೆ ಚರ್ಚಿಸಿ ಕಾರ್ಯಕ್ರಮದ ಯಶಸ್ಸಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಮಂಜುನಾಥ್, ತಹಸೀಲ್ದಾರ್‌ಗಳಾದ ಮಹೇಶ್, ಪ್ರಕಾಶ್, ನರಗುಂದ, ತಾಪಂ.ಇಒ ಜಯಣ್ಣ ಇದ್ದರು.