ನಾಳೆ ಮಳವಳ್ಳಿ ಬಂದ್‌ಗೆ ಕರೆ

24 mlv 2
Published on

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ಕುಡಿಯಲು ಕಾವೇರಿ ನೀರು ಪೂರೈಕೆಯಾಗುತ್ತಿದ್ದು ನಮ್ಮ ಜನರ ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಸೆ.26 ರಂದು ಮಳವಳ್ಳಿ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದ್ದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ಪಕ್ಷಾತೀತವಾಗಿ ಬಂದ್‌ಗೆ ಬೆಂಬಲ ನೀಡುವಂತೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮನವಿ ಮಾಡಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ಜಲಾಶಯದ ನೀರು ಕಾವೇರಿ ಕಣಿವೆ ರೈತರ ಕೃಷಿಗೆ ಇಲ್ಲದಂತಾಗಿದೆ. ಅದರಲ್ಲೂ ಜಲಾಶಯದ ವಿಶ್ವೇಶ್ವರಯ್ಯ ನಾಲೆಯ ಕೊನೆಯ ಭಾಗವಾಗಿರುವ ನಮ್ಮ ತಾಲೂಕಿನ ಅನ್ನದಾತರು ಒಂದು ರೀತಿಯಲ್ಲಿ ಶಾಪಗ್ರಸ್ಥರಾಗಿದ್ದಾರೆ. ನಾಲೆ ನೀರು ನಂಬಿಕೊಂಡು ಬೆಳೆ ಹಾಕುತ್ತೇವೆ ಎನ್ನುವುದು ಕನಸಿನ ಮಾತು. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಸೆ.26ರಂದು ಪಟ್ಟಣ ಬಂದ್‌ಗೆ ನಿರ್ಧರಿಸಲಾಗಿದೆ. ಜನಪರ ಹೋರಾಟಗಾರರು, ಕನ್ನಡಪರ ಸಂಘಟನೆಗಳು, ವರ್ತಕರು, ಆಟೋ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಂಬ ನೀಡಬೇಕೆಂದು ಮನವಿ ಮಾಡಿದರು.


ಸಭೆಯಲ್ಲಿ ಐವತ್ತಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಎಚ್. ಕೆಂಪಯ್ಯ, ಸದಸ್ಯರಾದ ಪ್ರಶಾಂತ, ಕುಮಾರ, ನೂರುಲ್ಲಾ, ಕಸಾಪ ಅಧ್ಯಕ್ಷ ಚೇತನ್ ಕುಮಾರ್, ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ನಾಗೇಶ್, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಎಂ.ಆರ್. ಮಹೇಶ್ ಕುಮಾರ್, ಮುಖಂಡರಾದ ಮಲ್ಲೇಗೌಡ, ಚಿಕ್ಕಮುಲಗೂಡು ಪುಟ್ಟಬುದ್ದಿ, ಪುಟ್ಟರಾಜು, ಕೃಷ್ಣ ಮೂರ್ತಿ, ಸದಾನಂದ, ಮೆಹಬೂಬ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net