ನಾಳೆ ಬೂವನಹಳ್ಳಿಯಲ್ಲಿ ಬೃಹತ್ ಆರೋಗ್ಯ ಶಿಬಿರ

ನಾಳೆ ಬೂವನಹಳ್ಳಿಯಲ್ಲಿ ಬೃಹತ್ ಆರೋಗ್ಯ ಶಿಬಿರ
Published on

ಹಾಸನ: ತಾಲೂಕಿನ ಬೂವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ ತಿಳಿಸಿದರು.

ನಗರದ ಜೀವಜ್ಯೋತಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ನ ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆ.6 ಬೆಳಿಗ್ಗೆ 10 ಗಂಟೆಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಚಾಲನೆ ನೀಡುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ 14 ತಜ್ಞ ವೈದ್ಯರು ಶಿಬಿರದಲ್ಲಿ ಭಾಗಿಯಾಗಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೂವನಹಳ್ಳಿ ಹಾಗು ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಜೀವಜ್ಯೋತಿ ಆಸ್ಪತ್ರೆಯ ಮುಖ್ಯಸ್ಥ ಎ.ಇ.ಡಾ.ಚಂದನ್ ಮಾತನಾಡಿ, ಜೀವಜ್ಯೋತಿ ಆಸ್ಪತ್ರೆಯ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶಿಬಿರದಲ್ಲಿ ಸುಮಾರು 500 ರಿಂದ 800 ಮಂದಿಗೆ ಹೆಲ್ತ್ ಕಾರ್ಡ್ ನೀಡಲು ಉದ್ದೇಶಿಸಲಾಗಿದೆ. ಈ ಕಾರ್ಡ್ ಪಡೆದವರು ಆರು ತಿಂಗಳ ವರೆಗೂ ಶೇ.20 ರ ರಿಯಾಯ್ತಿ ದರದಲ್ಲಿ ಯಾವುದೇ ಚಿಕಿತ್ಸೆ ಹಾಗೂ ಒಪಿಡಿ ಚಿಕಿತ್ಸೆಗೆ ಶೇ.50 ರಷ್ಟು ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದರು

ಈ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಕೀಲು ಮತ್ತು ಮೂಳೆ ರೋಗ ತಜ್ಞರು, ಮೆದುಳು, ನರರೋಗ ತಜ್ಞರು, ಮಕ್ಕಳ ರೋಗ ತಜ್ಞರು, ಮನೋರೋಗ ಮತ್ತು ಮನೋವ್ಯಾಧಿ ತಜ್ಞರು, ಫಿಜಿಷಿಯನ್, ಕ್ಯಾನ್ಸರ್, ದಂತ ಹಾಗು ನೇತ್ರವೈದ್ಯರು ಸೇರಿ ಪರಿಣಿತ ವೈದ್ಯರು ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಶಿಬಿರದಲ್ಲಿ ಭಾಗವಹಿಸಿ ಅನುಕೂಲ ಪಡೆಯಬಹುದು. ಶಿಬಿರದಲ್ಲಿ ತಪಾಸಣೆ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ, ನಮ್ಮ ಆಸ್ಪತ್ರೆಯಲ್ಲೇ ರಿಯಾಯ್ತಿ ದರದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಮಕ್ಕಳ ರೋಗ ತಜ್ಞರಾದ ಡಾ. ವೈ.ಎಂ.ಭಾವಿಕ, ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಮಧುಸೂಧನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net