ಹೊಳೆನರಸೀಪುರ: ಕೃಷಿ ಭೂಮಿಯನ್ನು ವಕ್ಫ್ ಆಸ್ತಿ ಎಂದು ಬಿಂಬಿಸಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿಯನ್ನು ಕಬಳಿಸಲು ಮುಂದಾಗಿರುವುದನ್ನು ಖಂಡಿಸಿ ನ.7ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ತಿಳಿಸಿದರು.
ರೈತರ ಜಮೀನು, ಮಠಗಳ ಆಸ್ತಿಯ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿ ಮುಸ್ಲಿಂ ಸಮುದಾಯಕ್ಕೆ ಸಹಾಯ ಮಾಡಿ ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಜಿಲ್ಲೆಯ ಪ್ರತಿ ರೈತರು ತಮ್ಮ ಜಮೀನಿನ ಪಹಣಿಗಳನ್ನು ಪರಿಶೀಲಿಸಿಕೊಳ್ಳಿ. ಅದರಲ್ಲಿ ವಕ್ಫ್ ಆಸ್ತಿಯೆಂದು ಕಾಲಂ 9ರಲ್ಲಿ ನಮೂದಿಸುವ ಸಾಧ್ಯತೆ ಹೆಚ್ಚಿದೆ. ಈ ರೀತಿ ಸಮಸ್ಯೆ ಕಂಡುಬಂದಲ್ಲಿ ಬಿಜೆಪಿ ತಾಲೂಕು ಘಟಕದ ಸದಸ್ಯರನ್ನು ಸಂಪರ್ಕಿಸಿ. ಬಿಜೆಪಿ ನಿಮ್ಮ ಪರವಾಗಿ ನಿಂತು ಹೋರಾಟ ಮಾಡಿ ನಿಮ್ಮ ಜಮೀನು ಉಳಿಸಿಕೊಡಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಮಂಡಲ ನಿಕಟಪೂರ್ವ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ವಕ್ಫ್ ಸಚಿವ ಜಮೀರ್ ಅಹಮ್ಮದ್ ರೈತರ ಜಮೀನು, ಪುರಾತತ್ವ ಇಲಾಖೆಯ ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾರೆ. ಐದಾರು ಜಿಲ್ಲೆಗಳಲ್ಲಿ ಈಗಾಗಲೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸಮೂದಿಸಲಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹಮ್ಮದ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಕೂಡಲೇ ಪಹಣಿಯಲ್ಲಿರುವ ವಕ್ಫ್ ಬೋರ್ಡ್ ಪದವನ್ನು ತೆಗೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಮಾತನಾಡಿ, ನ.7ರಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಎತ್ತಿನ ಗಾಡಿಯೊಂದಿಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸುತ್ತೇವೆ ಎಂದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್, ವಿದ್ಯಾಪ್ರಸಾದ್, ಮುಖಂಡರಾದ ಯೋಗಾನರಸಿಂಹ, ಯೋಗೇಶ್, ದೇವರಾಜು, ಅಭಿಷೇಕ್, ಶ್ರೀನಿವಾಸ್ ಭಾಗವಹಿಸಿದ್ದರು.