

ಹಾಸನ : ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮುಖಂಡರು ಮತ್ತು ನಾನು ಕೇವಲ ಉತ್ಸವ ಮೂರ್ತಿಗಳಾಗಿರುತ್ತೇವೆ. ಮತದಾರರೇ ಈ ಬಾರಿಯ ಚುನಾವಣೆ ಮಾಡಲಿದ್ದಾರೆ ಎಂದು ಶಾಸಕ ಹಾಗೂ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ. ಗೌಡ ತಿಳಿಸಿದರು.
ಬಿಜೆಪಿ ಪಕ್ಷದ ವರಿಷ್ಠರು ನನ್ನ ಮೇಲೆ ಭರವಸೆ ಇಟ್ಟು 2ನೇ ಬಾರಿಗೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಆದ್ದರಿಂದ ಶುಕ್ರವಾರ ನಾಮಪತ್ರ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಇಂದು ಕೇವಲ ರ‌್ಯಾಲಿ ಅಷ್ಟೇ ಮಾಡಲಿದ್ದು, ಮುಂದಿನ ದಿನಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳೆಲ್ಲರ ತೀರ್ಮಾನದಂತೆ ಶುಕ್ರವಾರ ಬೆಳಗ್ಗೆ 9 ರಿಂದ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಮೆರವಣಿಗೆ ಹೊರಟು ನಗರದ ಸಹ್ಯಾದ್ರಿ ವೃತ್ತ, ಮಹಾವೀರ, ಹೇಮಾವತಿ ಪ್ರತಿಮೆ, ಎನ್.ಆರ್. ವೃತ್ತದ ಮೂಲಕ ಬಿಎಂ ರಸ್ತೆಗೆ ಆಗಮಿಸಲಾಗುವುದು ಎಂದರು.
ಏ.14 ಈ ದೇಶಕ್ಕೆ ಸಂವಿಧಾನ ಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ ಮತ್ತು ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಸಂದರ್ಭ ಹಾಗೂ ಲಕ್ಷ್ಮೀ ಪೂಜೆಯ ಶುಭ ಶುಕ್ರವಾರವಾಗಿರುವುದರಿಂದ ಈ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸರ್ಕಾರಿ ರಜೆ ಆಗಿರುವುದರಿಂದ ಸಾರ್ವಜನಿಕರು ಮತ್ತು ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ನನಗೆ ಟಿಕೆಟ್ ಸಿಕ್ಕಿತ್ತು. ಆ ಸಂದರ್ಭದಲ್ಲಿ ಕ್ಷೇತ್ರದ ಮತದಾರರು ನನ್ನ ಮೇಲೆ ಭರವಸೆ ಇಟ್ಟು ಮತ ನೀಡಿದ್ದರಿಂದ ಜಯಶೀಲನಾದೆ. ನನ್ನ ಅವಧಿಯಲ್ಲಿ ನಾನು ಹೇಳಿದಂತೆ ಧೂಳುಮುಕ್ತ ರಸ್ತೆ, ರಿಂಗ್ ರಸ್ತೆ, ಕುಡಿಯುವ ನೀರು, ವಿಮಾನ ನಿಲ್ದಾಣ, ಫುಡ್‌ಕೋರ್ಟ್, ಪಾರ್ಕ್ ಮತ್ತು ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಮಾಡಿದ್ದೇನೆ. ಮುಂದೆಯೂ ಕೂಡ ಉತ್ತಮ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈ ಬಾರಿ 7 ಸ್ಥಾನಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ನಂ. 1 ಸ್ಥಾನ ಪಡೆಯಲಾಗುವುದು. ನಂತರದ ಸ್ಥಾನದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಇರಲಿವೆ. ನನ್ನ ಕ್ಷೇತ್ರವಲ್ಲದೆ ಪಕ್ಕದ ಜಿಲ್ಲೆಯ ಚಾಮುಂಡೇಶ್ವರಿ, ಹುಣಸೂರು, ಪಾಂಡವಪುರ ಹಾಗೂ ನಮ್ಮ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ ಎಂದರು.
ಎಟಿಆರ್ ಅವರು ಪಕ್ಷಕ್ಕೆ ಬಂದಿರುವುದು ನಮಗೆ ದೊಡ್ಡ ಶಕ್ತಿ ಬಂದಂತಾಗಿದೆ. ಅವರು ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡುತ್ತೇನೆ ಎಂದಿರುವುದು ಅವರ ದೊಡ್ಡಗುಣ. ಇವರಿಂದ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಕೂಡ 5 ಸಾವಿರದಿಂದ 10 ಸಾವಿರದವರೆಗೆ ಮತಗಳು ಬಿಜೆಪಿಗೆ ಬರಲಿವೆ. ಮುಂದಿನ ದಿನಗಳಲ್ಲಿ ಪಕ್ಷ ಅವರನ್ನು ಬಳಸಿಕೊಳ್ಳಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹುಡಾ ಅಧ್ಯಕ್ಷ ಲಲಾಟ್ ಮೂರ್ತಿ, ನಗರಸಭೆ ಅಧ್ಯಕ್ಷ ಮೋಹನ್‌ಕುಮಾರ್, ಮಂಡಲದ ಅಧ್ಯಕ್ಷರಾದ ವೇಣುಗೋಪಾಲ್ ಮತ್ತು ರಂಗನಾಥ್ ಇದ್ದರು.
ರೇವಣ್ಣನನ್ನು ಹಾಡಿಹೊಗಳಿದ ಪ್ರೀತಂ:
ಇಷ್ಟು ದಿನ ಶಾಸಕ ಪ್ರೀತಂ ಗೌಡ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಇಂದಿನ ಸುದ್ದಿಗೋಷ್ಠಿಯಲ್ಲಿ ರೇವಣ್ಣ ಅವರನ್ನು ಹಾಡಿ ಹೊಗಳಿ, ಅವರ ಶಕ್ತಿಯ ಬಗ್ಗೆ ಗುಣಗಾನ ಮಾಡಿದರು.
ಜಿಲ್ಲೆಯಲ್ಲಿ ಎಚ್.ಡಿ.ರೇವಣ್ಣ ಅವರಿಗೆ ಅವರದ್ದೇ ಶಕ್ತಿ ಇದೆ. ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. 6 ಜನ ಶಾಸಕರನ್ನು ಗೆಲ್ಲಿಸಿಕೊಂಡಿದ್ದಾರೆ. ರಾಜಕಾರಣದಲ್ಲಿ ಆರೋಪ, ಸವಾಲು ಇವೆಲ್ಲಾ ಸರ್ವೆ ಸಾಮಾನ್ಯ. ಆದರೆ ಅವರ ಬಗ್ಗೆ ಗೌರವವಿದೆ. ಅವರು ಪ್ರಭಾವಿ ನಾಯಕರು. ಅವರಿಗೆ ಅವರದ್ದೇ ಆದ ವರ್ಚಸ್ಸಿದೆ. ಅದೇ ರೀತಿ ಹಾಸನದಲ್ಲಿ ನನ್ನ ಶಕ್ತಿ ಇದೆ ಎಂದರು.
ರೇವಣ್ಣನವರು ಹಾಸನದಲ್ಲಿ ಸ್ಪರ್ಧೆ ಮಾಡಿದರೆ ನಾನು 50 ಸಾವಿರ ಮತ ಪಡೆಯುತ್ತೇನೆ ಎಂಬ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಅಭ್ಯರ್ಥಿ ಯಾರೆಂಬುದರ ಬಗ್ಗೆ ನಾನು ಚಿಂತಿಸುವುದಿಲ್ಲ. ಈ ಬಾರಿ 1 ಲಕ್ಷ ಮತ ಪಡೆಯುತ್ತೇನೆ. ಬೇಕಾದರೆ ಈಗಲೇ ಹೋಗಿ ಇವಿಎಂ ಮೆಷಿನ್ ಪರೀಕ್ಷಿಸಿಕೊಳ್ಳಿ. ಆಮೇಲೆ ನನ್ನ ಮೇಲೆ ಆರೋಪ ಮಾಡುವುದು ಬೇಡ. ನಾನು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದು, ಇವಿಎಂನಲ್ಲಿ ಏನೋ ಮಾಡಿದ್ದಾರೆ ಎಂದು ದೂರುವುದು ಬೇಡ ಎಂದು ವ್ಯಂಗ್ಯವಾಗಿ ಹೇಳಿದರು.
ದೊಡ್ಡಮನೆ ಕುಟುಂಬ ಬಿಟ್ಟು ನನ್ನ ಗೆಲ್ಲಿಸಿದರು:
ಹೊಳೆನರಸೀಪುರದ ದೇವೇಗೌಡರ ಹಾಗೂ ಹಾಸನದ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಅವರ ದೊಡ್ಡಮನೆಯ ಕುಟುಂಬ 40 ವರ್ಷದ ರಾಜಕಾರಣದಿಂದ ಜನ ಬೇಸತ್ತು ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ಆರಿಸಿದ್ದಾರೆ. ದೇವೇಗೌಡರ ಕುಟುಂಬದಲ್ಲಿ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಯಾಗಿದ್ದಾರೆ. ಅದೇ ರೀತಿ ಎಚ್.ಎಸ್.ಪ್ರಕಾಶ್ ಅವರು ಕೂಡ 4 ಬಾರಿ ಗೆಲುವು ಕಂಡಿದ್ದಾರೆ. ಅದೇ ರೀತಿ ಅವರ ಸಹೋದರ ನಗರಸಭೆ ಅಧ್ಯಕ್ಷರಾಗಿದ್ದರು. ಅವರ ಪುತ್ರ ಜಿಪಂ ಸದಸ್ಯ ಹಾಗೂ ಉಪಾಧ್ಯಕ್ಷರಾಗಿದ್ದವರು. ಇಂತಹ ಕುಟುಂಬದವರನ್ನು ಬಿಟ್ಟು ಕ್ಷೇತ್ರದ ಜನರು ಯಾವ ಸ್ಥಾನವನ್ನು ಅಲಂಕರಿಸದ ಸಾಮಾನ್ಯ ಕುಟುಂದಿಂದ ಬಂದ ನನ್ನ ಕೈ ಹಿಡಿದಿದ್ದಾರೆ ಎಂದರು.