

ಹಾಸನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಅರವಿಂದ ಶಾಲೆ ವತಿಯಿಂದ ಕರುನಾಡ ಕಲಾ ವೈಭವ ಜನಪದ ಮೇಳೆ ಕಾರ್ಯಕ್ರಮವನ್ನು ನ.12 ರಂದು ನಗರದಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಲೆಯ ಕನ್ನಡ ಶಿಕ್ಷಕ ಅರುಣ್ ಕುಮಾರ್ ತಿಳಿಸಿದರು.
ಕನ್ನಡ ನಾಡು, ನುಡಿ ಬಗ್ಗೆ ಅಪಾರ ಗೌರವ ಹೊಂದಿರುವ ಶಾಲೆ. ಈ ಹಿಂದೆಯೂ ಅನೇಕ ಕನ್ನಡಾಭಿಮಾನ ಇರುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಅದೇ ರೀತಿ ನ12ರಂದು ಮಂಗಳವಾರ ಕೂಡ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ನಗರದ ಕುವೆಂಪು ವೃತ್ತ, ದಾಸರಕೊಪ್ಪಲು, ಸಾಲಗಾಮೆ ವೃತ್ತ, ಸ್ಲೆಟರ್ಸ್ ಹಾಲ್ ವೃತ್ತ, ಹೇಮಾವತಿ ವೃತ್ತ, ಸಂತೆ ಪೇಟೆ, ಎನ್.ಆರ್ ವೃತ್ತ, ಆಡುವಳ್ಳಿ, ಡೈರಿ ವೃತ್ತ, ಭುವನಹಳ್ಳಿ ಸೇರಿ ಸುಮಾರು 10 ವೃತ್ತಗಳಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಭಾಷೆ ಹಾಗೂ ನಾಡು, ನುಡಿ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ಜರುಗಲಿದ್ದು ಭರತನಾಟ್ಯ, ಕಂಸಾಳೆ, ಡೊಳ್ಳು ಕುಣಿತ ಹೀಗೆ ವಿವಿಧ ದೇಶೀಯ ಕಲಾ ತಂಡಗಳು ಎಲ್ಲಾ ಪ್ರಮುಖ ವೃತ್ತಗಳಲ್ಲಿ ನೃತ್ಯ, ಹಾಡುಗಳ ಮೂಲಕ ರಂಜಿಸಲಿವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಸಂಯೋಜಕ ಸಹ್ಯದ್ ಅಬ್ರಹಾರ್, ಕನ್ನಡ ಶಿಕ್ಷಕ ಅರವಿಂದ್, ಹಾಗೂ ಸಂಸದರ ಮಾಧ್ಯಮ ಸಂಯೋಜಕ ಸ್ವರೂಪ್ ಇದ್ದರು