ನಾಳೆ ದೊಡ್ಡಬಾಲ ಹುಚ್ಚಪ್ಪ ಸ್ವಾಮಿ ಜಾತ್ರೆ

Published on

ನಾಗಮಂಗಲ: ತಾಲೂಕಿನ ಬಿಂಡಿಗನವಿಲೆ ಹೋಬಳಿ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ನಂತರ ಹುಚ್ಚಪ್ಪ ಸ್ವಾಮಿ ದೇವರ ಮತ್ತು ಹದಿನಾಲ್ಕು ಕೂಟದ ಬೀರೆ ದೇವರುಗಳ ಜಾತ್ರಾ ಮಹೋತ್ಸವ ಏ.22ರಂದು ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

ಜಾತ್ರಾ ಮಹೋತ್ಸವದ ಅಂಗವಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ದೊರೆ ದೊಡ್ಡಯ್ಯಸ್ವಾಮಿ, ಕಾಟಣ್ಣಸ್ವಾಮಿ, ದಳವಾಯಿ ದೊಡ್ಡಯ್ಯಸ್ವಾಮಿ, ಮಂತ್ರಿ ಹುಚ್ಚಪ್ಪಸ್ವಾಮಿ, ಮುಂಗೊಂಡ ಮುಂದಲಾರತಿ ಚಿಕ್ಕಯ್ಯಸ್ವಾಮಿ, ಗಾಳಿಗಂಡ ಹುಚ್ಚಪ್ಪಸ್ವಾಮಿ, ನೇರಲಕೆರಮ್ಮ ದೇವಿ, ಹೊಂಗನೂರಮ್ಮ ದೇವಿ, ಸಿದ್ದರಾಮೇಶ್ವರ ಸ್ವಾಮಿ, ಕದಬಳ್ಳರಾಯ ಸ್ವಾಮಿ, ಕರಿಯಾಳರಾಯ ಸ್ವಾಮಿ, ಮಲ್ಲೇಶ್ವರ ಸ್ವಾಮಿ, ಬೋರೆದೇವರು ಸೇರಿದಂತೆ ರಾಮದೇವರ ಉತ್ಸವ ಮೂರ್ತಿಗಳು ಹದಿನಾಲ್ಕು ಕೂಟದ ದೇವರುಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿವೆ.

22ರಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

21ರಂದು ಹದಿನಾಲ್ಕು ಕೂಟದ ದೇವರುಗಳ ಧೂಪ-ಆರತಿಯನ್ನು ವಾದ್ಯಗೋಷ್ಠಿಯೊಂದಿಗೆ ಗ್ರಾಮಕ್ಕೆ ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ಬಳಿಕ ಅನ್ನ ಸಂತರ್ಪಣೆ ಮಾಡಲಾಗುವುದು. ರಾತ್ರಿ 1ರಿಂದ ಬೆಳಗ್ಗೆ 4 ಗಂಟೆಯವರೆಗೆ ಬಾಯಿಬೀಗ ಸೇವೆ ನಡೆಯಲಿದೆ. ಊರಿನ ಪ್ರಮುಖ ಬೀದಿಗಳಲ್ಲಿ ದೇವರುಗಳ ಮೆರವಣಿಗೆ, ನಂದಿಧ್ವಜ ಕುಣಿತ, ಹಲಗೆ ಕುಣಿತ, ಮದ್ದುಗುಂಡು ಬಾಣ ಬಿರುಸಿನೊಂದಿಗೆ ಬೆಳಗ್ಗೆ 4 ಗಂಟೆಗೆ ಗಂಗಾಸ್ನಾನ, ಹೂವು ಹೊಂಬಾಳೆ ಧಾರಣೆ ಮಾಡಲಾಗುವುದು. ಸಂಜೆ 5ಕ್ಕೆ ಕೊಂಡ ಹಾಯುವ ಕಾರ್ಯಕ್ರಮದೊಂದಿಗೆ ದೊಡ್ಡಬಾಲ ಮಂತ್ರಿ ಹುಚ್ಚಪ್ಪಸ್ವಾಮಿಯ ಬೇಡಿಕೆ ಉತ್ಸವವನ್ನು (ರಾಶಿಪೂಜೆ) ಏರ್ಪಡಿಸಲಾಗಿದೆ.

22ರಂದು ಮೂಲ ವಿಗ್ರಹಕ್ಕೆ ಅಭಿಷೇಕ, ಮಹಾಮಂಗಳಾರತಿ, ಮುಡಿಸೇವೆ, ಅನ್ನ ಸಂತರ್ಪಣೆ ಇದೆ. ಸಂಜೆ 14 ದೇವರುಗಳ ಗಂಗಾಸ್ನಾನ, ಮಹಾಮಂಗಳಾರತಿ ನಡೆಯಲಿದೆ. ನಂತರ ಬೀಡಿಕೆಯವರ ಮತ್ತು ಭಕ್ತ ಆರತಿ ಸೇವೆ, ದೇವರುಗಳ ಉತ್ಸವ ಜರುಗುತ್ತದೆ. 23ರಂದು ಹುಚ್ಚಪ್ಪ ಸ್ವಾಮಿ ದೇವಸ್ಥಾನದಿಂದ 14 ದೇವರುಗಳ ಉತ್ಸವ ಹೊರಟು ಬನ್ನಿಮಂಟಪದಲ್ಲಿ ಸೇರುವ ಜತೆಗೆ ಹಣ್ಣುತುಪ್ಪ ಸೇವೆಯೊಂದಿಗೆ ಶಿವಪೂಜೆ ನಂತರ ಗ್ರಾಮದ ಕಲ್ಯಾಣಿ ಮುಂದೆ ಪಾನಕ ಸೇವೆ, ಎದುರಾರತಿ, ಮೆರವಣಿಗೆ ಜರಗುತ್ತದೆ. ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ, 3 ಗಂಟೆಗೆ 14 ದೇವರುಗಳ ಬೀಳ್ಕೊಡುವ ಕಾರ್ಯಕ್ರಮದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಡಿಸಿ, ಸಿಇಒ ಭೇಟಿ:

ಜಾತ್ರಾ ಮಹೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆ ಮತ್ತು ಭದ್ರತೆ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net