ನಾಳೆ ಜಿಲ್ಲಾ ಯುವ ಉತ್ಸವ: ನಟರಾಜ್

ನಾಳೆ ಜಿಲ್ಲಾ ಯುವ ಉತ್ಸವ: ನಟರಾಜ್
Published on

ಹಾಸನ: ಕೇಂದ್ರ ಸರ್ಕಾರದ ಯುವಜನ ವ್ಯವಹಾರ, ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರದಿಂದ ಆ.5 ಶನಿವಾರರಂದು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಯುವ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ತಿಳಿಸಿದರು.

ದೇಶಾದ್ಯಂತ ಯುವ ಉತ್ಸವ ಇಂಡಿಯಾ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಯುವ ಉತ್ಸವ ಹಮ್ಮಿಕೊಳ್ಳಲಾಗಿದೆ. ಆ.5 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವವರು. ಶಾಸಕ ಹೆಚ್.ಪಿ.ಪ್ರಕಾಶ್ ಅಧ್ಯಕ್ಷತೆ ವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯುವ ಜನರಲ್ಲಿರುವ ಪ್ರತಿಭೆಯನ್ನು ಹೊರತಲು ಇದೊಂದು ಉತ್ತಮ ವೇದಿಕೆಯಾಗಿದ್ದು, 15 ವರ್ಷದಿಂದ 29 ವರ್ಷದೊಳಗಿನ ಎಲ್ಲಾ ಯುವಕ ಯುವತಿಯರು ಸ್ಪರ್ಧೆಗೆ ಭಾಗವಹಿಸಬಹುದಾಗಿದೆ. ಚಿತ್ರಕಲಾ ಸ್ಪರ್ಧೆ, ಕವನ ಬರೆಯುವ ಸ್ಪರ್ಧೆ, ಛಾಯಗ್ರಹಣ ಸ್ಪರ್ಧೆ, ಭಾಷಣ, ಜಾನಪದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನನ್ನ ಭೂಮಿ ನನ್ನ ದೇಶ ಆದೋಲನ:

ಭಾರತ ಸ್ವಾತಂತ್ರೃದ 75 ವರ್ಷದ ಹಿನ್ನೆಲೆ ಮೇರಿ ಮಾಟಿ ಮೇರಾ ದೇಶ್ ಮಿಟ್ಟಿ ಕೋ ನಮನ್, ವೀರೋಂ ಕಾ ವಂದನ್ ಘೋಷವಾಕ್ಯದೊಂದಿಗೆ ನನ್ನ ಭೂಮಿ ನನ್ನ ದೇಶ ಆದೋಲನವನ್ನು ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಆದೋಲನದಡಿ ಹುತಾತ್ಮ ಯೋಧರ ನಾಮಫಲಕ ಸ್ಥಾಪನೆ, ಗಿಡ ನೆಡುವ ಕಾರ್ಯಕ್ರಮ, ಪಂಚಪ್ರಾಣ ಪ್ರತಿಜ್ಞೆ ಸ್ವೀಕಾರ, ನಿವೃತ್ತ ಯೋಧರು,ಸ್ವಾತಂತ್ರೃ ಹೋರಾಟಗಾರರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಪ್ರತಿಹಳ್ಳಿಯಿಂದಲೂ ಮಣ್ಣು ಸಂಗ್ರಹಿಸಿ ಅದನ್ನು ದೆಹಲಿಯ ಕರ್ತವ್ಯ ಪಥದಲ್ಲಿ ಸಂಗ್ರಹಿಸಿ ಅದರಲ್ಲಿ ಗಿಡಗಳನ್ನು ಬೆಳೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನೆಹರು ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಅಭಿಷೇಕ ಚವರೆ, ಕಲಾವಿದ ಬಿ.ಟಿ.ಮಾನವ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net