ನಾಳೆ ಗೂಗಲ್ ಮೀಟ್‌ನಲ್ಲಿ ಪಾಲಿಕೆ ಸಾಮಾನ್ಯ ಸಭೆ : ಅಜೆಂಡಾದಲ್ಲಿ ಗಂಭೀರ ವಿಷಯಗಳ ಪ್ರಸ್ತಾಪ ಇಲ್ಲ

25Tmk_Palike_Google_Meeting
Published on

ತುಮಕೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಗೂಗಲ್ ಮೀಟ್‌ನಲ್ಲಿ ಆಯೋಜಿಸಲಾಗಿದೆ. ರಾಜ್ಯ ಸರ್ಕಾರದ ಸೂಚನೆ ಅನ್ವಯ ಪರಸ್ಪರ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಮೇಯರ್ ಬಿ.ಜಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಕರೆದಿರುವ ಮೇ 27ರ ಸಾಮಾನ್ಯ ಸಭೆಯು ವರ್ಚುವಲ್ ಆಗಿ ನಡೆಯುತ್ತಿರುವ ಪ್ರಪ್ರಥಮ ಸಭೆ ಎನಿಸಲಿದೆ.

ಇ-ಬಜೆಟ್ ಮಂಡಿಸಿದ ಖ್ಯಾತಿ ಹೊಂದಿರುವ ಮಹಾನಗರ ಪಾಲಿಕೆ ಈಗ ಗೂಗಲ್ ಮೀಟ್ ಬಳಸಿ ಸಾಮಾನ್ಯ ಸಭೆ ನಡೆಸಲು ಮುಂದಾಗಿದೆ. ಸಭೆಗೆ ಮುನ್ನಾದಿನ 35 ಚುನಾಯಿತ ಸದಸ್ಯರು, ಐವರು ನಾಮನಿರ್ದೇಶಿತ ಸದಸ್ಯರು ಹಾಗೂ ವಿವಿಧ ಶಾಖೆಗಳ ಮುಖ್ಯಸ್ಥರಿಗೆ ಆ್ಯಪ್‌ನ ಲಿಂಕ್ ಕಳುಹಿಸಲಾಗುವುದು. ಅಂದು ಬೆಳಗ್ಗೆ 11ಕ್ಕೆ ಆರಂಭವಾಗಲಿರುವ ಸಭೆಗೆ ಕಾರ್ಪೋರೇಟರ್‌ಗಳು ಮನೆಯಲ್ಲೇ ಕುಳಿತು ಸೇರಿಕೊಳ್ಳಬಹುದು. ಈಗಾಗಲೇ ಸದಸ್ಯರು ನೀಡಿರುವ ವಿಷಯಗಳ ಅಜೆಂಡಾ (ಕಾರ್ಯಸೂಚಿ) ಸಿದ್ಧಪಡಿಸಿದ್ದು ಅದರ ಬಗ್ಗೆ ಚರ್ಚಿಸಬಹುದಾಗಿದೆ. ಈ ಹೊಸ ಪ್ರಯತ್ನ ಸದಸ್ಯರ ಪಾಲಿಗೆ ವಿಶೇಷವೆನಿಸಲಿದೆ.

2 ವರ್ಷದಲ್ಲಿ 3 ಸಭೆ: ಕಳೆದ 2 ವರ್ಷಗಳಲ್ಲಿ ಈವರೆಗೆ ಕೇವಲ 3 ಸಾಮಾನ್ಯ ಸಭೆಗಳು ನಡೆದಿವೆ. 2019ರಲ್ಲಿ ಲಲಿತಾ ಮೇಯರ್ ಆಗಿದ್ದ ಅವಧಿಯಲ್ಲಿ 2 ಸಭೆ ನಡೆದಿದ್ದವು. 2020ರಲ್ಲಿ ಕರೊನಾ ನೆಪವೊಡ್ಡಿ ಒಂದೇ ಒಂದು ಸಾಮಾನ್ಯ ಸಭೆ ನಡೆದಿದ್ದು ಅದು ಕೇವಲ 3 ಗಂಟೆಗೆ ಸೀಮಿತವಾಗಿದ್ದ ನಿರ್ಬಂಧಿತ ಸಭೆಯಾಗಿತ್ತು.

ಕರೊನಾ ನಡುವೆ ನಡೆಯುತ್ತಿರುವ ಸಾಮಾನ್ಯ ಸಭೆಯಲ್ಲಿ ಜ್ವಲಂತ ಸಮಸ್ಯೆಗಳ ಪ್ರಸ್ತಾಪವಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಆದರೆ, ಸಭೆಯ ಅಜೆಂಡಾದಲ್ಲಿ ಕರೊನಾ ಸಂಕಷ್ಟದ ಬಗ್ಗೆಯಾಗಲಿ, ಕುಡಿಯುವ ನೀರಿನ ಸಮಸ್ಯೆಯಂತಹ ಗಂಭೀರ ವಿಷಯಗಳನ್ನು ಯಾವೊಬ್ಬ ಸದಸ್ಯರು ನಗರದ ಜನತೆ ದೃಷ್ಟಿಯಿಂದ ಪ್ರಸ್ತಾಪಿಸದೇ ಇರುವುದನ್ನು ನೋಡಿದರೆ ಇದೊಂದು ನಾಮ್‌ಕೇ ವಾಸ್ತೆ ಸಭೆ ಆಗುವ ಎಲ್ಲ ಮುನ್ಸೂಚನೆಗಳು ಕಾಣುತ್ತಿವೆ.

ನಂದಿನಿ ಹಾಲಿನ ಬೂತ್ !: ಈ ಬಾರಿಯ ಸಾಮಾನ್ಯಸಭೆ ಅಜೆಂಡಾದಲ್ಲಿ 20ಕ್ಕೂ ಹೆಚ್ಚು ಕಾರ್ಪೋರೇಟರ್‌ಗಳು ವಾರ್ಡ್‌ಗಳಲ್ಲಿ ಪಾಲಿಕೆ ಜಾಗದಲ್ಲಿ ನಂದಿನಿ ಹಾಲಿನ ಬೂತ್ ತೆರೆಯಲು ಪ್ರಸ್ತಾಪ ಇಟ್ಟಿರುವುದು ಗಮನಸೆಳೆದಿದೆ. ಭೂಬಾಲನ್ ಆಯುಕ್ತರಾಗಿದ್ದಾಗ ಶುದ್ಧ ನೀರಿನ ಘಟಕಗಳನ್ನು ಪಾಲಿಕೆ ವ್ಯಾಪ್ತಿಗೆ ಪಡೆದು ಕಾರ್ಪೋರೇಟರ್‌ಗಳಿಗೆ ಪ್ರತಿ ತಿಂಗಳು ಬರುತ್ತಿದ್ದ ಆದಾಯಕ್ಕೆ ಬ್ರೇಕ್ ಹಾಕಿದ್ದರು. ಈಗ ನಂದಿನಿ ಹಾಲಿನ ಬೂತ್‌ಗಳಿಗಾಗಿ ಸದಸ್ಯರ ಸಾಮೂಹಿಕ ಮನವಿಯ ಹಿಂದೆ ಇಂತಹ ಅಕ್ರಮದ ವಾಸನೆ ಬಡಿಯುತ್ತಿದೆ. ಇನ್ನುಳಿದಂತೆ ಆಸ್ತಿ, ನೀರಿನ ತೆರಿಗೆ ಹೆಚ್ಚಿಸುವುದು, ರಸ್ತೆ, ವೃತ್ತಗಳಿಗೆ ನಾಮಕರಣ, ಪೌರಕಾರ್ಮಿಕರಿಗೆ ವೇತನ ಹೆಚ್ಚಳ, ಸ್ಥಾಯಿಸಮಿತಿಗಳ ಸಭೆಯ ನಿರ್ಣಯಗಳಿಗೆ ಅನುಮತಿ, ಈಗಾಗಲೇ ಕೈಗೊಂಡಿರುವ ಕಾಮಗಾರಿಗಳಿಗೆ ಘಟನೋತ್ತರ ಮಂಜೂರಾತಿ ಸೇರಿ ಹಲವು ವಿಷಯಗಳು ಚರ್ಚೆಗೆ ಬರಲಿವೆ.

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪಾಲಿಕೆ ಸಾಮಾನ್ಯ ಸಭೆಯನ್ನು ಗೂಗಲ್ ಮೀಟ್‌ನಲ್ಲಿ ಕರೆಯಲಾಗಿದೆ. ಮೇಯರ್, ಉಪಮೇಯರ್, ಸ್ಥಾಯಿಸಮಿತಿ ಅಧ್ಯಕ್ಷರು ಹಾಗೂ ವಿವಿಧ ಶಾಖೆಗಳ ಮುಖ್ಯಸ್ಥರು ಪಾಲಿಕೆ ಸಭಾಂಗಣದಲ್ಲಿದ್ದುಕೊಂಡು ಸಭೆಯಲ್ಲಿ ಪಾಲ್ಗೊಳ್ಳುವರು. ಇನ್ನು ಸದಸ್ಯರು ಮನೆಯಲ್ಲೇ ಕುಳಿತು ವರ್ಚವಲ್ ಸಭೆಯ ಚರ್ಚೆಯಲ್ಲಿ ಭಾಗವಹಿಸಬಹುದು. ರೇಣುಕಾ, ಆಯುಕ್ತೆ, ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮುಖಾಮುಖಿ ನಡೆದ ಚರ್ಚೆಯ ಫಲಿತಾಂಶವೇ ಶೂನ್ಯ. ಇನ್ನು ಗೂಗಲ್ ಮೀಟಿಂಗ್ ನೆಪ ಮಾತ್ರಕ್ಕೆ ಆಯೋಜಿಸದಂತಾಗಲಿದೆ. ಮುಕ್ತವಾಗಿ ವಾರ್ಡ್ ಸಮಸ್ಯೆಗಳನ್ನು ನಮಗೆ ಕೊಡುವ ಸಮಯದಲ್ಲಿ ಹಂಚಿಕೊಳ್ಳಲು ಆಗುವುದಿಲ್ಲ. ನಗರದಲ್ಲಿ ವಾರ್ಡ್‌ವಾರು ಕಾಮಗಾರಿ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ, ಬಹುತೇಕ ಕಾಮಗಾರಿಗಳು ಅವೈಜ್ಞಾನಿಕವೆನಿಸಿವೆ. ಇದಕ್ಕೆ ಹೊಣೆ ಯಾರು?. ಲಕ್ಷ್ಮೀನರಸಿಂಹರಾಜು, ಕಾರ್ಪೋರೇಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net