

ಹಾಸನ: ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಸಮಾಜದಲ್ಲಿ ಸೌಹಾರ್ದತೆಯಿಂದ ಬಾಳುವ ಉದ್ದೇಶದಿಂದ ಅ.16ರ ಬುಧವಾರ ಕರ್ನಾಟಕ ಸ್ವಾಭಿಮಾನ ನಡಿಗೆ ಹಮ್ಮಿಕೊಳ್ಳಲಾಗಿದೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಮಹಾರಾಜ ಪಾರ್ಕ್‌ನಿಂದ ಸ್ವಾಭಿಮಾನ ನಡಿಗೆ ಆರಂಭವಾಗಿ ಮಧ್ಯಾಹ್ನ 1 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಸಭೆ ಜರುಗಲಿದೆ ಎಂದು ಪ್ರಕೃತಿ ಸೇವಾ ಸಂಸ್ಥೆಯ ಅಧ್ಯಕ್ಷೆ ವರ್ಷಾ ಹಾಸನ್ ತಿಳಿಸಿದರು.
ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಕೆಲ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಬೆಂಬಲಿಸುತ್ತವೆ. ಅವುಗಳಲ್ಲಿ ಹಲವು ಸಂಸ್ಥೆಗಳು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಬೆಂಬಲಿಸುತ್ತವೆ. ಈ ಬೆಳವಣಿಗೆಗಳು ಸ್ವಾಗತಾರ್ಹವಾದರೂ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಇನ್ನೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಮಾಜ ಮತ್ತು ಕುಟುಂಬವು ಒಪ್ಪಿಕೊಳ್ಳದ ಕಾರಣ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಮುಕ್ತವಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೆಚ್ಚಿನ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ವಸತಿ ಒಂದು ಪ್ರಮುಖ ಸಮಸ್ಯೆಯಾಗಿದೆ ಏಕೆಂದರೆ ಅವರ ಕುಟುಂಬಗಳು ಅವರನ್ನು ತಿರಸ್ಕರಿಸಿದ ನಂತರ ತಾವೇ ಸ್ವಂತವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೆಚ್ಚಿನ ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ಅಥವಾ ಲೈಂಗಿಕ ವೃತ್ತಿಯ ಮೂಲಕ ಜೀವನ ಸಾಗಿಸಬೇಕಾಗಿದೆ. ಅವರು ಪೊಲೀಸರು, ರೌಡಿಗಳು ಮತ್ತು ಭಿಕ್ಷುಕರ ಕಾಲೋನಿ ಅಧಿಕಾರಿಗಳಿಂದ ನಿರಂತರ ಕಿರುಕುಳ ಮತ್ತು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಕೃತಿ ಸಮುದಾಯ ಸೇವಾ ಸಂಸ್ಥೆ, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ, ಸಂಗಮ, ಕರ್ನಾಟಕ ಸಂಘರ್ಷ ಸಮಿತಿ (ಭೀಮವಾದ), ಕರ್ನಾಟಕ ರಕ್ಷಣಾ ವೇದಿಕೆ (ರಿ), ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ), ಯಶಸ್ವಿನಿ ಶ್ರೇಯೋಭಿವೃದ್ಧಿ ಸಂಸ್ಥೆ, ಜೀವನಾಶ್ರಯ ನೆಟ್‌ವರ್ಕ್, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಕ್ರಿಸ್ಟೋ ಕ್ರೈಸ್ತೋ ಕಾರಿಡಾಸ್ ಸಂಸ್ಥೆ (ಟಿಐ) ಮತ್ತು ಕಲಾ ತಂಡ, ಪ್ರಗತಿಪರ ಚಿಂತಕರು ಸ್ವಾಭಿಮಾನ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಗಮ ಸಂಸ್ಥೆಯ ಉಪಾಧ್ಯಕ್ಷೆ ಆರಾಧ್ಯಾ, ಆರ್ಯಾ, ಅಶ್ವತ್, ಸಂಗಮ್, ರವೀಶ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ವೆಂಕಟೇಶ್ ಇತರರು ಉಪಸ್ಥಿತರಿದ್ದರು.