ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ

4-pnp 3 trinetra mahanta shivayogi
ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ
Published on

ಪಾಂಡವಪುರ: ತಾಲೂಕಿನ ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿ ಮಠದ ಲಿಂಗೈಕ್ಯ ಮರಿದೇವರು ಶಿವಯೋಗಿ ಸ್ವಾಮೀಜಿಯ 15 ವರ್ಷದ ಪುಣ್ಯಸ್ಮರಣೆ ಹಾಗೂ 7ನೇ ವರ್ಷದ ಮಹಾ ರಥೋತ್ಸವ ಪ್ರಯುಕ್ತ ಆ.6ರಂದು ಬೃಹತ್ ಆಯುರ್ವೇದ ಉಚಿತ ಆರೋಗ್ಯ ತಪಾಸಣಾ ಹಾಗೂ ಮಧುಮೇಹ ಚಿಕಿತ್ಸಾ ಶಿಬಿರವನ್ನು ಗ್ರಾಮದ ಜ್ಞಾನ ಕುಟೀರ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ಡಿ.ಎಂ.ಎಸ್ ಚಂದ್ರವನ, ತ್ರಿನೇತ್ರ ಆಯುರ್ವೇದಿಕ್ ಇಂಟರ್‌ನ್ಯಾಷನಲ್ ಆಯುರ್ವೇದಿಕ್ ಟ್ರೀಟ್‌ಮೆಂಟ್ ಸೆಂಟರ್, ಶ್ರೀರಕ್ಷಾ ಆಯುರ್ವೇದಿಕ್ ಟ್ರೀಟ್‌ಮೆಂಟ್ ಸೆಂಟರ್, ಡಿಎಂಎಸ್ ಜ್ಞಾನಕುಟೀರ ಶಾಲೆ ಮತ್ತು ರೋಟರಿ ಚಂದ್ರವನದ ಸಹಯೋಗದಲ್ಲಿ ಆಯೋಜಿಸಿರುವ ಶಿಬಿರವನ್ನು ಜಿಲ್ಲಾಧಿಕಾರಿ ಡಾ.ಕುಮಾರ್ ಉದ್ಘಾಟಿಸಲಿದ್ದು, ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯತಿಥಿಗಳಾಗಿ ಆಯುಷ್ ಇಲಾಖೆಯ ನಿವೃತ್ತ ಡಿಎಒ ಡಾ.ಎನ್.ನಾಗೇಶ್, ಜಿಎಆರ್‌ಸಿ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿಬಿರದಲ್ಲಿ ರಕ್ತ ಪರೀಕ್ಷೆ, ಇಸಿಜಿ, ಹೃದ್ರೋಗ ತಪಾಸಣೆ, ಜನರಲ್ ಫಿಜಿಷಿಯನ್, ಔಷಧಗಳ ವಿತರಣೆ, ದಂತ ತಪಾಸಣೆ, ನೇತ್ರ ತಪಾಸಣೆ ಹಾಗೂ ಮೂತ್ರ ಪಿಂಡ ತಪಾಸಣೆ ನಡೆಯಲಿದ್ದು, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮೈಸೂರು, ಆಯುರ್ವೇದ ಆಕಾಡೆಮಿ ಚಾಮರಾಜಪೇಟೆ, ನಾರಾಯಣ ಹೃದಯಾಲಯ, ಜೆಎಸ್‌ಎಸ್ ದಂತ ಮಹಾವಿದ್ಯಾಲಯ, ಮೈಸೂರು, ಸುಯೋಗ್ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

13ಕ್ಕೆ ಮಹಾರಥೋತ್ಸವ: ಲಿಂಗೈಕ್ಯ ಮರಿದೇವರು ಶಿವಯೋಗಿ ಮಹಾಸ್ವಾಮೀಜಿಯ 15 ವರ್ಷದ ಪುಣ್ಯಸ್ಮರಣೆ ಹಾಗೂ 7ನೇ ವರ್ಷದ ಮಹಾರಥೋತ್ಸವ ಪ್ರಯುಕ್ತ ಆ.13ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಅಂದು ಪ್ರಾತಃಕಾಲ ಕರ್ತೃ ಗದ್ದುಗೆಗೆ ಮಹಾಪೂಜೆ, ಏಕಾದಶ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆ ಜರುಗಲಿದೆ. ಬೆಳಗ್ಗೆ 8 ಗಂಟೆಗೆ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರು ಮಹಾ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 11ಕ್ಕೆ ಧಾರ್ಮಿಕ ಸಮಾರಂಭ ಆರಂಭವಾಗಲಿದೆ. ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕಾಡಸಿದ್ದೇಶ್ವರ ಮಠ, ನೊಣವಿನಕೆರೆ ಮಠಾಧ್ಯಕ್ಷ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳು ಲಿಂಗೈಕ್ಯ ಮರಿದೇವರು ಸ್ವಾಮೀಜಿಗಳ ಬೆಳ್ಳಿ ಮುಖಪದ್ಮ ಲೋಕಾರ್ಪಣೆ ಮಾಡಲಿದ್ದಾರೆ. ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡುವರು. ಚಲನಚಿತ್ರ ನಟ ಆದಿ ಲೋಕೇಶ್ ಚಂದ್ರವನ ಕಂಪು ಪುಸ್ತಕ ಬಿಡುಗಡೆ ಮಾಡಲಿದ್ದು, ಅಂದು ರಾತ್ರಿ 8ಗಂಟೆಗೆ ಹಾಸ್ಯ ಭರಿತ ಸಾಮಾಜಿಕ ನಾಟಕ ರಂಗಣ್ಣನ ಮದುವೆ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net