ನಾಲ್ವರು ಸ್ಟಾಫ್ ನರ್ಸ್ ಸೇರಿ 17 ಮಂದಿಗೆ ಕರೊನಾ

CG hospitol
Published on

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ನಾಲ್ವರು ಸ್ಟಾಫ್ ನರ್ಸ್‌ಗಳು ಸೇರಿದಂತೆ 17 ಮಂದಿಯಲ್ಲಿ ಕರೊನಾ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 203ಕ್ಕೆ ಏರಿಕೆಯಾಗಿದೆ.

ಚಿಗಟೇರಿ ಜಿಲ್ಲಾಸ್ಪತ್ರೆಯ ನಾಲ್ವರು ಸ್ಟಾಫ್ ನರ್ಸ್‌ಗಳು, ಇಬ್ಬರು ಗ್ರೂಪ್ ‘ಡಿ’ ನೌಕರರಿಗೆ ಸೋಂಕು ತಗುಲಿದೆ. ಇವರು ಆಸ್ಪತ್ರೆಯ ತುರ್ತು ಚಿಕಿತ್ಸೆ, ಐಸೊಲೇಶನ್ ವಾರ್ಡ್ ಇನ್ನಿತರ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದವರು ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ನಾಗರಾಜ್ ತಿಳಿಸಿದರು.

ನರ್ಸ್‌ಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ 17 ಮಂದಿ ಹಾಗೂ ಇಬ್ಬರು ವೈದ್ಯರು ಸೇರಿದಂತೆ ದ್ವಿತೀಯ ಸಂಪರ್ಕದಲ್ಲಿದ್ದ 23 ಜನರನ್ನು ಗುರುತಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ 9 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇತ್ತೀಚೆಗೆ ಕರೊನಾ ಸೋಂಕಿನಿಂದ ಮೃತಪಟ್ಟ ಬಸವರಾಜಪೇಟೆಯ ವೃದ್ಧೆಯ ಕುಟುಂಬದ 5 ಜನ ಸದಸ್ಯರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೊಂಡದ ವೃತ್ತದ 71 ವರ್ಷದ ವೃದ್ಧೆಯಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಎಸ್‌ಜೆಎಂ ನಗರದ ಮೂವರಿಗೆ, ಜಾಲಿನಗರದ ಒಬ್ಬರಿಗೆ ಸೋಂಕು ಹರಡಿದೆ.

ಸೋಂಕಿನಿಂದ ಚೇತರಿಸಿಕೊಂಡ ಒಬ್ಬ ವ್ಯಕ್ತಿಯನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 150ಕ್ಕೇರಿದೆ.

ಭಾನುವಾರ 511 ಗಂಟಲುದ್ರವದ ಮಾದರಿಗಳನ್ನು ಸಂಗ್ರಹಿಸಲಾಯಿತು. 143 ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ. 5 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಲಾಯಿತು. 82 ಜನ 28 ದಿನಗಳ ಅವಲೋಕನ ಅವಧಿ ಪೂರ್ಣಗೊಳಿಸಿದರು. 22 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಯಿತು. ಜಿಲ್ಲೆಯಲ್ಲಿ 47 ಸಕ್ರಿಯ ಕೋವಿಡ್ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net