

ಚಾಮರಾಜನಗರ: ಹಣ ಡಬಲ್ ಮಾಡಿಕೊಡುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಪಿಎಸ್‌ಐ ಮತ್ತು ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಅಯ್ಯನಗೌಡ, ಕಾನ್ಸ್‌ಸ್ಟೇಬಲ್‌ಗಳಾದ ಮಹೇಶ್, ಬಸವಣ್ಣ ಮತ್ತು ಮೋಹನ್ ಅವರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ವಿಜಯವಾಣಿಯೊಂದಿಗೆ ಮಾತನಾಡಿ, ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಇಲಾಖಾ ಘನತೆಗೆ ಧಕ್ಕೆ ತಂದಿದ್ದಿರುವ ಕಾರಣ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?: ತಮಿಳುನಾಡಿನ ಸಚ್ಚಿದಾನಂದ ತಿರುಪೂರಿನಲ್ಲಿ ಗಾರ್ಮೆಂಟ್ಸ್ ಮತ್ತು ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿದ್ದಾನೆ. ಈತನಿಗೆ 3 ತಿಂಗಳ ಹಿಂದೆ ಅನ್ಸಾರಿ ಎಂಬ ವ್ಯಕ್ತಿ ಪರಿಚಯವಾಗಿದೆ. ತನ್ನ ವ್ಯಾಪಾರದಲ್ಲಿ ಹಣ ಹೂಡಿದರೆ ಕಡಿಮೆ ಅವಧಿಯಲ್ಲಿ ಡಬಲ್ ಮಾಡಿಕೊಡುವುದಾಗಿ ಅನ್ಸಾರಿ ತಿಳಿಸಿದ್ದಾನೆ. ಈ ಬಗ್ಗೆ ಚರ್ಚೆ ನಡೆಸಲು ಚಾಮರಾಜನಗರಕ್ಕೆ ಆಹ್ವಾನ ನೀಡಿದ್ದಾರೆ. ಅದರಂತೆ ಜು.26ರಂದು ನಗರದ ಖಾಸಗಿ ಹೋಟೇಲ್‌ಗೆ ಸಚ್ಚಿದಾನಂದ 3 ಲಕ್ಷ ರೂ.ಗಳೊಂದಿಗೆ ಬಂದಿದ್ದಾನೆ. ಹೋಟೇಲ್‌ನ ರೂಂನಲ್ಲಿ ಕಾಯುತ್ತಿದ್ದಾಗ ನಾಲ್ಕು ಜನರು ಮತ್ತು ಪೊಲೀಸ್ ಸಮವಸ ಧರಿಸಿರುವ ವ್ಯಕ್ತಿಯೊಬ್ಬ ಬಂದು ಬೆದರಿಕೆ ಹಾಕಿ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದೀಯಾ, ನಿಮ್ಮನ್ನ ದಸ್ತಗಿರಿ ಮಾಡಿ, ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಬೆದರಿಸಿದ್ದಾರೆ. ಆಗ ಸಚ್ಚಿದಾನಂದ ಸಮವಸದಲ್ಲಿದ್ದ ಪೊಲೀಸ್ 3 ಲಕ್ಷ ರೂ. ತೆಗೆದುಕೊಂಡ. ಮತ್ತೆ 1 ಲಕ್ಷ ರೂ. ಕೊಡಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿ 70 ಸಾವಿರ ರೂ. ಪೋನ್ ಪೇ ಮಾಡಿಸಿಕೊಂಡ ಎಂದು ಸಚ್ಚಿದಾನಂದ ದೂರು ನೀಡಿದ್ದನು.