ನಾಲ್ವರು ಆರೋಪಿಗಳು ನ್ಯಾಯಾಂಗ ವಶಕ್ಕೆ

arrest-new15384158611634987641
Published on

ಮೈಸೂರು: ನಗರದ ಚಾಮುಂಡಿಪುರಂನಲ್ಲಿ ಒಂದೇ ಕುಟುಂಬದ ನಾಲ್ವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.


ಎಂ.ಪಿ.ಮಂಜುನಾಥ್, ರಮೇಶ್, ಮಹದೇವ ಮತ್ತು ರವಿಕುಮಾರ್ ಬಂಧಿತರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬರಡನಪುರ ಗ್ರಾಮದ ಮಹದೇವಸ್ವಾಮಿ(48), ಪತ್ನಿ ಅನಿತಾ (38), ಪುತ್ರಿಯರಾದ ಚಂದ್ರಕಲಾ(17) ಮತ್ತು ಧನಲಕ್ಷ್ಮೀ(15) ಅವರ ಮೃತದೇಹಗಳು ಬಾಡಿಗೆ ಮನೆಯಲ್ಲಿ ಭಾನುವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಮಹದೇವಸ್ವಾಮಿ ಬರೆದಿದ್ದ ಪತ್ರ ಪತ್ತೆಯಾಗಿದ್ದು, ಇದರ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.


ತರಕಾರಿ ದಲ್ಲಾಳಿಯಾಗಿದ್ದ ಮಹದೇವಸ್ವಾಮಿ, ಬಂಡಿಪಾಳ್ಯದ ಎಪಿಎಂಸಿಯಲ್ಲಿ ಮಳಿಗೆ ಹೊಂದಿದ್ದರು. ಇದನ್ನು ಮಂಜುನಾಥ್‌ಗೆ ದಲ್ಲಾಳಿಗಳಾದ ರಮೇಶ್, ಮಹದೇವ ಮತ್ತು ರವಿಕುಮಾರ್ ಅವರೊಂದಿಗೆ ಸೇರಿಕೊಂಡು 42 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ 32 ಲಕ್ಷ ರೂ. ಮುಂಗಡವಾಗಿ

ಪಡೆದಿದ್ದರು ಎಂದು ತಿಳಿದುಬಂದಿದೆ. ಆದರೆ, ಮಳಿಗೆ ಮಾರಾಟಕ್ಕೆ ಮಹದೇವಸ್ವಾಮಿ ಕುಟುಂಬದ ಸದಸ್ಯರು ಒಪ್ಪಿರಲಿಲ್ಲ. ಒಪ್ಪಂದ ಕರಾರು ಪತ್ರವನ್ನು ವಾಪಸ್ ನೀಡುವಂತೆ ಕೇಳಿದ್ದರು. ಇದಕ್ಕೆ ಆರೋಪಿಗಳು ಹಣ ಪೂರ್ತಿ ಕೊಟ್ಟು ಪತ್ರ ತೆಗೆದುಕೊಳ್ಳುವಂತೆ ಹೇಳಿದ್ದರು.

ಆ ವೇಳೆಗೆ ಹಣ ಖರ್ಚಾಗಿತ್ತು. ಇದರಿಂದ ಮನನೊಂದ ಮಂಜುನಾಥ್ ಪತ್ರ ಬರೆದಿಟ್ಟು, ಕುಟುಂಬ ಸಮೇತ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net