ನಾಲ್ವರ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

ನಾಲ್ವರ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್
Published on

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು 3ನೇ ಜಿಲ್ಲಾ ಅಧಿಕ ಮತ್ತು ಸತ್ರ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.
ಪೆನ್ ಡ್ರೈವ್ ಹಂಚಿಕೆ ಕುರಿತು ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್, ಬೇಲೂರು ತಾಲೂಕು ನೆಲ್ಕೆಯ ನವೀನ್‌ಗೌಡ, ಕಾರ್ತಿಕ್‌ಗೌಡ, ಚೇತನ್‌ಗೌಡ ಹಾಗು ಪುಟ್ಟರಾಜು ಎಂಬುವರ ವಿರುದ್ಧ ವಕೀಲ ಪೂರ್ಣಚಂದ್ರ ತೇಜಸ್ವಿ ಸಿಇಎನ್ ಠಾಣೆಯಲ್ಲಿ ಏ. 23ರಂದು ದೂರು ದಾಖಲಿಸಿದ್ದರು. ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 3ನೇ ಜಿಲ್ಲಾ ಅಧಿಕ ಮತ್ತು ಸತ್ರ ನ್ಯಾಯಾಧೀಶ ಆನಂದ್ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇದಕ್ಕಾಗಿಯೇ ಸರ್ಕಾರ ಎಸ್‌ಐಟಿ ರಚಿಸಿದೆ. ಇದೊಂದು ಗಂಭೀರ ಪ್ರಕರಣ ಆಗಿರುವುದರಿಂದ ಜಾಮೀನು ನೀಡುವುದು ಅಸಾಧ್ಯ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಪರ ವಾದ ಮಂಡಿಸಿದ ವಕೀಲ ಗೋಪಾಲಗೌಡ ಅವರು, ರಿಮೈಂಡ್ ಸ್ಟೇಟ್‌ಮೆಂಟ್‌ನಲ್ಲಿ ಕಾರ್ತಿಕ್ ಗೌಡ, ಚೇತನ್‌ಗೌಡ, ಪುಟ್ಟರಾಜು, ನವೀನ್‌ಗೌಡ ಬಗ್ಗೆ ಪ್ರಸ್ತಾಪ ಆಗಿದ್ದರೂ ದೂರು ದಾಖಲಾಗಿ ಹದಿನೈದು ದಿನ ಆದರೂ ಇವರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿದರು. ಆರೋಪಿಗಳ ವಿರುದ್ಧ ದಾಖಲಾಗಿರುವ ಕೇಸ್ ಗಂಭೀರ ಸ್ವರೂಪದ್ದಾಗಿದೆ. 10 ವರ್ಷ ಮೇಲ್ಪಟ್ಟು ಶಿಕ್ಷೆ ಪ್ರಮಾಣ ವಿಧಿಸಬಹುದಾದ ಕೇಸ್ ಇದಾಗಿದೆ. ರೇವಣ್ಣ ಅವರ ವಿರುದ್ಧ ಕೇಸ್ ದಾಖಲಾದ ದಿನವೇ ಬಂಧನ ಮಾಡಲಾಯಿತು. ಆದರೆ ಹೆಣ್ಣು ಮಕ್ಕಳ ಮಾನಹಾನಿ ಮಾಡುವ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕೇಸ್ ಆಗಿ ಹದಿನೈದು ದಿನ ಆದರೂ ಇನ್ನೂ ಬಂಧನ ಆಗಿಲ್ಲ. ಕೂಡಲೇ ಪೊಲೀಸ್ ಇಲಾಖೆ ಈ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಇವರ ಬಂಧನ ಆಗದಿದ್ದರೆ ಸಾಕ್ಷೃ ನಾಶವಾಗುವ ಸಾಧ್ಯತೆಯಿದೆ ಎಂದು ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net