

ಮೈಸೂರು: ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಮಹಾರಾಜರಿಗಿಂತ ಹೆಚ್ಚು ಅಥವಾ ಮಹಾರಾಜರಷ್ಟೇ ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆ ಸಿದ್ದರಾಮಯ್ಯ ಅವರ ಕೆಲಸವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಸಿದರು.
ಸಾಕಷ್ಟು ಅಭಿವೃದ್ಧಿಯನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಅಭಿವೃದ್ಧಿ ಮಾಡಿರುವುದಕ್ಕೆ ಸಾಧನಾ ಸಮಾವೇಶ ಮಾಡಿದ್ದು. ಪ್ರತಿಪಕ್ಷಗಳ ನಾಯಕರು ಸುಮ್ಮನೇ ಟೀಕೆ ಮಾಡುತ್ತಾರೆ ಎಂದು ಕುಟುಕಿದರು.
ಯಾರು ಹೇಳಿದ್ದು ಐದು ವರ್ಷ ಸಿದ್ದರಾಮಯ್ಯ ಸಿಎಂ ಅಲ್ಲ ಅಂತ. ಅವರು 5 ವರ್ಷ ಸಿಎಂ ಹೌದೋ, ಅಲ್ಲವೋ ಎಂಬ ಚರ್ಚೆಯೇ ಸರಿಯಲ್ಲ. ನಮ್ಮ ಪಕ್ಷದವರು ಯಾರಾದ್ರು ಹೇಳಿದ್ದಾರಾ? ಇದು ಪ್ರತಿಪಕ್ಷಗಳು ಸೃಷ್ಟಿ ಮಾಡಿದ ಚರ್ಚೆ ಎಂದು ಹರಿಹಾಯ್ದರು.
ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಕ್ರಾಂತಿ ಅಂದರೆ ಅದು ಸಿಎಂ ಬದಲಾವಣೆ ಅಂತ ಅರ್ಥವೇ? ಏಕೆ ಕ್ರಾಂತಿಯನ್ನು ಸಿಎಂ ಬದಲಾವಣೆಗೆ ತಂದು ನಿಲ್ಲಿಸುತ್ತೀರಾ. ಬೇರೆ ವಿಚಾರಕ್ಕೆ ಕ್ರಾಂತಿಯಾಗಬಹುದು.
ಅದು ಯಾವ ಕ್ರಾಂತಿ ಎಂದು ರಾಜಣ್ಣ ಅವರನ್ನೇ ಕೇಳಿ. ಕ್ರಾಂತಿ ಅಂದರೆ ಸಿಎಂ ಬದಲಾವಣೆ ಎನ್ನುವ ಅರ್ಥವನ್ನು ಮೊದಲು ಬಿಡಿ. ಹೈಕಮಾಂಡ್, ಕಾಂಗ್ರೆಸ್ ಶಾಸಕರು ಎಲ್ಲರೂ ತಂದೆಯ ಪರವಾಗಿದ್ದಾರೆ. ಅವರು ಏಕೆ ಬದಲಾಗುತ್ತಾರೆ? ಎಂದು ಪ್ರತಿಕ್ರಿಯಿಸಿದರು.