ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಸ್ಮರಿಸುವ ಕೆಲಸವಾಗಲಿ

05Rajesh8
Published on

ಚಾಮರಾಜನಗರ: ಪ್ರಜಾ ಪ್ರತಿನಿಧಿ ಸಭೆಯಲ್ಲಿ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ನೀಡುವುದರ ಜತೆಗೆ ದಲಿತರಿಗೆ ಅರಮನೆ ಪ್ರವೇಶ ಕಲ್ಪಿಸಿದ ಸಾಮಾಜಿಕ ಕಾನೂನು ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಕವಿ ಹನುಸೋಗೆ ಸೋಮಶೇಖರ್‌ಬಣ್ಣಿಸಿದರು.

ನಗರದ ಪರಿವರ್ತನ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಆಯೋಜಿಸಿದ್ದ ರಾಜರ್ಷಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿದರು. ಮೈಸೂರು ಮಹಾ ಸಂಸ್ಥಾನದಲ್ಲಿ ಸುಧೀರ್ಘ 38 ವರ್ಷಗಳ ಕಾಲ ಪ್ರಜೆಗಳ ನೆಮ್ಮದಿಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಿಟ್ಟಿದ್ದ ದಕ್ಷ ಆಡಳಿತಗಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸಾಧಕರ ಸಾಧನೆಯನ್ನು ಮೊಬೈಲ್‌ನಲ್ಲಿ ನೋಡುವುದನ್ನು ಬಿಟ್ಟು ಪುಸ್ತಕ ಓದಿ ತಿಳಿದುಕೊಳ್ಳಬೇಕು ಎಂದರು.

ನಾಲ್ಕು ದಶಕಗಳ ನಾಲ್ವಡಿ ಕೃಷ್ಣರಾಜ ಒಡೆಯರ ಸುವರ್ಣ ಯುಗದ ಚಿತ್ರಣವನ್ನು ಕಟ್ಟಿಕೊಡುವ ಹೆಚ್ಚು ಪುಸ್ತಕಗಳು ಲಭ್ಯವಿಲ್ಲ. ಇತಿಹಾಸದ ಪುಟಗಳಲ್ಲಿ ನಾಲ್ವಡಿ ಅವರ ಸಾಧನೆಗಳನ್ನು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ನಡೆದಿರುವುದು ಬೇಸರದ ಸಂಗತಿ ಎಂದರು.

ಭೋಗಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಕೀರ್ತಿ, ಹಿರಿಮೆಯನ್ನು ದೇಶದ ಉದ್ದಗಲಕ್ಕೂ ಹಬ್ಬಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಶ್ವ ಜ್ಞಾನಿಯಾಗಿದ್ದರು ಎಂದು ಸ್ಮರಿಸಿದರು.

ಸೆಸ್ಕ್ ಲೆಕ್ಕಾಧಿಕಾರಿ ಎನ್.ಮಹೇಶ್ ಮಾತನಾಡಿ, ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಜನಾನುರಾಗಿದ್ದರು ಎಂದರು. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿದರು. ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಎಂ ಕೃಷ್ಣಮೂರ್ತಿ, ಸೆಸ್ಕ್ ಕಿರಿಯ ಇಂಜಿನಿಯರ್ ಎಸ್.ಸಿದ್ದರಾಜಪ್ಪ, ಚಾಮರಾಜನಗರ ದಸಾಪ ಅಧ್ಯಕ್ಷ ಶಿವಕುಮಾರ್ ಸರಗೂರು, ಗುಂಡ್ಲುಪೇಟೆ ಅಧ್ಯಕ್ಷ ಕೆ.ಯೋಗೇಶ್, ಯಳಂದೂರು ಅಧ್ಯಕ್ಷ ಬಳೆಪೇಟೆ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net