ನಾಲ್ಕು ಸಾವಿರ ಪೊಲೀಸ್ ಹುದ್ದೆ ಭರ್ತಿಗೆ ಕ್ರಮ

DIP (6)--02
Published on


ಚಿತ್ರದುರ್ಗ: ರಾಜ್ಯದಲ್ಲಿ ಒಂದು ಸಾವಿರ ಪಿಎಸ್‌ಐ, 3 ಸಾವಿರ ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋರ್ಟ್ ಆದೇಶದಂತೆ 545 ಹುದ್ದೆಗಳ ಭರ್ತಿಗೆ ಕೆಇಎಯಿಂದ ಮರು ಪರೀಕ್ಷೆ ನಡೆಸಲು ಆದೇಶಿಸಲಾಗಿದೆ. ದಿನಾಂಕ ನಿಗದಿ ಆಗಬೇಕಿದೆ. ಇದರೊಂದಿಗೆ ಇನ್ನೂ ಒಂದು ಸಾವಿರ ಪಿಎಸ್‌ಐ ಹುದ್ದೆಗಳನ್ನು ಹಂತ, ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

ರಾಜ್ಯದಲ್ಲಿ 15 ಸಾವಿರ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿ ಹುದ್ದೆಗಳು ಭರ್ತಿ ಆಗಿರಲಿಲ್ಲ. ಈಗ 3 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಇನ್ನೂ 3 ಸಾವಿರ ಹುದ್ದೆಗಳು ಭರ್ತಿ ಮಾಡಲಾಗುವುದು. ಪೊಲೀಸ್ ತರಬೇತಿ ಶಾಲೆಗಳ ಸಾಮರ್ಥ್ಯ ವರ್ಷಕ್ಕೆ 3 ಸಾವಿರಕ್ಕಿಂತ ಅಧಿಕ ಸಂಖ್ಯೆ ಹುದ್ದೆಗಳ ಭರ್ತಿ ಅಸಾಧ್ಯವಾಗುತ್ತಿದೆ ಎಂದು ಹೇಳಿದರು.

ಅಗತ್ಯ ಸವಲತ್ತುಗಳೊಂದಿಗೆ ಹಾಗೂ ಸೈಬರ್ ಕ್ರೈಂನಂಥ ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಅಗತ್ಯ ತರಬೇತಿ ಕೊಡಲಾಗುವುದು. ಒತ್ತಡ ರಹಿತವಾಗಿ ಅವರು ಕೆಲಸ ಮಾಡುವಂತಹ ಪರಿಸರವನ್ನು ನಿರ್ಮಾಣ ಮಾಡಲಾಗುವುದು. 2025ರ ಅಂತ್ಯಕ್ಕೆ ರಾಜ್ಯದಲ್ಲಿ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುವುದು.

ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ 465 ಕೋಟಿ ರೂ. ರಾಜ್ಯದಿಂದ ಹಾಗೂ 264 ಕೋಟಿ ರೂ. ಅನುದಾನವನ್ನು ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಕನಿಷ್ಠ 80 ಸಾವಿರ ವಸತಿಗಳ ಅಗತ್ಯವಿದೆ ಎಂದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಬಲವರ್ಧನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ನಾನು ಪರಿಶೀಲನೆ ನಡೆಸಿದ್ದೇವೆ. ಡಿಸಿಆರ್‌ಇ ಸೆಲ್‌ಗಳಿಗೆ ಪೊಲೀಸ್ ಠಾಣಾಧಿಕಾರ ಕೊಡಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ನಮಲ್ಲಿ ದೌರ್ಜನ್ಯ ಪ್ರಕರಣಗಳಡಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಸೂಕ್ತ ತನಿಖೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಮೂಲಕ ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ಸೂಚಿಸಲಾಗಿದ್ದು, ಪಾಕ್ಷಿಕವಾಗಿ ಈ ಕುರಿತು ಪರಿಶೀಲಿಸಲಾಗುವುದು.

ಚಳ್ಳಕೆರೆ ತಾಲೂಕು ಪರಶುರಾಮಪುರ ಠಾಣೆ ವ್ಯಾಪ್ತಿಯಲ್ಲಿ ಆಗಿರುವ ಮತಾಂತರ ಪ್ರಕರಣದ ಕುರಿತಂತೆ ತನಿಖೆ ನಡೆಸಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

*ವಿಶ್ವಕಪ್ ನಮ್ಮದೆ
ವಿಶ್ವಕಪ್ ಕ್ರಿಕೆಟ್‌ನ 10 ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಅದೇ ಜೋಶ್‌ನಲ್ಲಿ ಫೈನಲ್‌ನಲ್ಲೂ ನಮ್ಮ ತಂಡ ಜಯಭೇರಿ ಬಾರಿಸಲಿದೆ. ಒಬ್ಬ ಕ್ರೀಡಾಪಟುವಾಗಿಯೂ ಅತ್ಯಂತ ವಿಶ್ವಾಸದೊಂದಿಗೆ ಈ ಮಾತು ಹೇಳುತ್ತಿದ್ದೇನೆ. ಅದೃಷ್ಟವೂ ತಂಡಕ್ಕೆ ನೆರ ವಾಗಲಿದೆ ಎಂದು ಗೃಹ ಸಚಿವರು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net