

ನಾಪೋಕ್ಲು: ಕೊಡಗಿನ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಮೊದಲ ಸ್ಥಾನವಿದ್ದರೆ ನಂತರದ ಸ್ಥಾನ ಕೈಲ್ ಮುಹೂರ್ತ ಹಬ್ಬಕ್ಕಿದೆ. ಕೈಲ್ ಪೊಳ್ದ್ ಎಂದರೆ ಆಯುಧ ಪೂಜೆ ಎಂಬ ಅರ್ಥ.
ನಾಲ್ಕುನಾಡು ವ್ಯಾಪ್ತಿಯಲ್ಲಿ ಆ.28ರಂದು ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುತ್ತದೆ. ಕೊಡಗಿನಲ್ಲಿ ಮಳೆಗಾಲ ಪ್ರಾರಂಭದಲ್ಲಿ ರೈತರು ಗದ್ದೆಯನ್ನು ಉತ್ತು, ಬಿತ್ತಿ ಗದ್ದೆಯನ್ನು ನಾಟಿ ಮಾಡಿ ದಣಿದ ಸಂದರ್ಭದಲ್ಲಿ ಸಂತೋಷದಿಂದ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಈ ಸಂದರ್ಭ ಗದ್ದೆ ಕೆಲಸದಲ್ಲಿ ದಣಿದ ಎತ್ತುಗಳನ್ನು ಸ್ಥಾನ ಮಾಡಿಸಿ ನಂತರ ಉಳುವುದಕ್ಕೆ ಉಪಯೋಗಿದ ಆಯುಧಗಳಾದ ನೇಗಿಲು, ನೊಗಕ್ಕೆ ಪೂಜೆ ಸಲ್ಲಿ ಎತ್ತುಗಳಿಗೆ ಪಣಿ ಪುಟ್ಟು ತಿನಿಸುತ್ತಾರೆ.
ಮನೆಯಲ್ಲಿರುವ ಆಯುಧಗಳಾದ ಕೋವಿ. ಕತ್ತಿ, ಭರ್ಜಿಯನ್ನು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಅದಕ್ಕೆ ಪೂಜೆ ಸಲ್ಲಿಸಿ ಹಬ್ಬದಲ್ಲಿ ಮಾಡಿದ ಖಾದ್ಯವಾದ ಕಡಂಬಿಟ್ಟು, ಹಂದಿ ಮಾಂಸದ ಸಾರು, ಕೋಳಿ ಮಾಂಸದ ಸಾರು, ಸಾರಾಯಿ ಮುಂತಾದವುಗಳನ್ನು ದೇವರಿಗೆ ಮೀದಿ ಇಟ್ಟು ತಾವೂ ಕುಡಿದು, ತಿಂದು ಸಂಭ್ರಮಿಸುತ್ತಾರೆ.
ಕೈಲ್ ಮುಹೂರ್ತ ಹಬ್ಬದ ಮುಖ್ಯ ಉಪಾಹಾರ ಎಂದರೆ ಕಡಂಬುಟ್ಟು, ಹಂದಿ ಮಾಂಸದ ಸಾರು ಮತ್ತು ಸಾರಾಯಿ. ಈ ಆಹಾರ ಪದಾರ್ಥ ಎಲ್ಲ ಕೊಡವ ಭಾಷಿಕರ ಮನೆಯಲ್ಲೂ ಕಂಡುಬರುತ್ತದೆ. ಈ ಸಂದರ್ಭ ನೆಂಟರಿಷ್ಟರು ಬಂದು ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಊರು ಊರುಗಳಲ್ಲೂ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಆಟೋಟಗಳ ಸ್ಪರ್ಧೆಗಳನ್ನು ಆಯೋಜಿಸಿ ಸಂಭ್ರಮಿಸುತ್ತಾರೆ. ಕೈಲ್ ಮುಹೂರ್ತ ಹಬ್ಬವನ್ನು ಒಂದೊಂದು ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ. ಗಾಳಿಬೀಡು ವಿಭಾಗದಲ್ಲಿ ಮೊದಲು ಹಬ್ಬವನ್ನು ಆಚರಿಸಲಾಗುತ್ತದೆ. ನಂತರ ನಾಲ್ಕು ನಾಡಿನಲ್ಲಿ ಆ.28ರಂದು ನಡೆಯುತ್ತದೆ. ನಂತರ ಕೊಡಗಿನಾದ್ಯಂತ ಸೆ.3ರಂದು ಹಬ್ಬ ಆಚರಿಸುತ್ತಾರೆ.