ನಾಲ್ಕು ತಿಂಗಳಲ್ಲಿ ಆರೋಗ್ಯ ಕೇಂದ್ರ ನಿರ್ಮಾಣ

ldh mla
ಮಲ್ಲೇನಹಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಶಂಕುಸ್ಥಾಪನೆ ನೇರವೇರಿಸಿದರು. ಚಂದ್ರಶೇಖರ್, ಎಂ.ಆರ್.ಧನಂಜಯ, ಎಂ.ಕೆ ಚಂದ್ರಪ್ಪ, ಬಿ.ಆರ್.ರವಿ, ಲೋಕೇಶಪ್ಪ ಇತರರಿದ್ದರು.
Published on

ಲಿಂಗದಹಳ್ಳಿ: ಮಲ್ಲೇನಹಳ್ಳಿ, ಆಳೂರು, ದೊಡ್ಡ ಲಿಂಗದಹಳ್ಳಿ, ಹುಲಿತಿಮ್ಮಾಪುರ ಮುಂತಾದ ಗ್ರಾಮಸ್ಥರ ಅನುಕೂಲಕ್ಕಾಗಿ ಮಲ್ಲೇನಹಳ್ಳಿಯಲ್ಲಿ ಆರೋಗ್ಯ ಇಲಾಖೆಯಿಂದ 65 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಮುಂದಿನ 4 ತಿಂಗಳ ಒಳಗೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಮಲ್ಲೇನಹಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕೇಂದ್ರಗಳ ಮೂಲಕ ಗ್ರಾಮಸ್ಥರಿಗೆ ಆಯಾ ಗ್ರಾಮಗಳ ಸಮೀಪವೇ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗಲಿದೆ. ಆರೋಗ್ಯ ಕೇಂದ್ರಕ್ಕೆ ಜಾಗ ನೀಡಿದ ಮುಖಂಡ ಜನಾರ್ದನ ಕಾರ್ಯ ಶ್ಲಾಘನೀಯ ಎಂದರು.

ಲಿಂಗದಹಳ್ಳಿ ಗ್ರಾಪಂ ಸದಸ್ಯ ಎಂ.ಆರ್. ಧನಂಜಯ ಮಾತನಾಡಿ, ಲಿಂಗದಹಳ್ಳಿ ಪಿಎಚ್‌ಸಿಯಲ್ಲಿ ಅನೇಕ ತಿಂಗಳುಗಳಿಂದ ಕಾಯಂ ವೈದ್ಯರಿಲ್ಲದೆ ಚಿಕಿತ್ಸೆಗೆ ತೊಂದರೆಯಾಗುತ್ತಿದ್ದು, ಕೂಡಲೇ ಕಾಯಂ ವೈದ್ಯರನ್ನು ನೇಮಿಸಬೇಕು. ಹುಲಿತಿಮ್ಮಾಪುರ, ಜಮ್ಮಾಪುರ, ಸಿದ್ದರಹಳ್ಳಿ, ಗ್ರಾಮಗಳ ವ್ಯಾಪ್ತಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಅನುದಾನ ಹಾಗೂ ಎಂಸಿಆರ್‌ಪಿ ಕಾಲನಿಯಲ್ಲಿನ ಒಂದು ಮುಖ್ಯ ಬೀದಿಯ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.

ಟಿಎಚ್‌ಒ ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ, ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಎನ್.ಲಿಂಗರಾಜು, ಸದಸ್ಯರಾದ ಎಂ.ಕೆ.ಚಂದ್ರಪ್ಪ, ಎಂ.ಆರ್.ಧನಂಜಯ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ರಾಮಪ್ಪ, ಕೆ.ಎಸ್.ಪರಮೇಶ್ವರಪ್ಪ, ವೆಂಕಟರಮಣಗೌಡ, ಗುತ್ತಿಗೆದಾರ ಲೋಕೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net