

ಹಾಸನ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ನೌಕರರಿಗೆ ಏಕಕಾಲದಲ್ಲಿ ಬಾಕಿ ವೇತನ, ಕನಿಷ್ಠ ವೇತನ, ಗ್ರಾಚ್ಯುಟಿ ಮತ್ತು ಸೇವಾ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮೂರನೇ ದಿನದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕೇಂದ್ರ ಸರ್ಕಾರವು ಕಳೆದ 5 ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಒಟ್ಟು 21,877 ಕೋಟಿ ರೂ.ಗಳಲ್ಲಿ ಇದುವರೆಗೂ ಕೇವಲ 7,247 ಕೋಟಿ ರೂಪಾಯಿಗಳನ್ನು ಮಾತ್ರ ನೀಡಿದೆ. ಇನ್ನೂ 14,630 ಕೋಟಿ ಬಾಕಿ ಉಳಿಸಿಕೊಂಡು ಕರ್ನಾಟಕ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ನೀಡದೆ ಜನರಿಗೆ ಸ್ಥಳೀಯವಾಗಿ ಅಲ್ಪಸ್ವಲ್ಪ ಇದ್ದ ಸೇವೆಯನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಸಂಘವು ನ್ಯಾಯಾಲಯದ ಆದೇಶವನ್ನು ಜಾರಿ ಮಾಡುವಂತೆ ಹೋರಾಟ ರೂಪಿಸಿದ ಮೇಲೆ ಕಾರ್ಮಿಕ ಸಚಿವರು ಮತ್ತು ಅಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಆದರೂ ಸರಕಾರ ಮೀನಾ ಮೇಷ ಎಣಿಸುತ್ತಿದೆ ತಕ್ಷಣವೇ ಸರ್ಕಾರ ಕನಿಷ್ಠ ವೇತನ 31,000 ರೂ. ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಜವಾನ, ನೀರುಗಂಟಿ, ಸ್ವಚ್ಛತಾಗಾರರು ಇತ್ಯಾದಿ ನೌಕರರು ಗ್ರಾಮ ಪಂಚಾಯಿತಿಗಳು ಆರಂಭವಾದ ಕಾಲದಿಂದಲೂ ಕನಿಷ್ಠ ಕೂಲಿ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯವಿಲ್ಲದೆ ದುಡಿಯುತ್ತಿದ್ದಾರೆ. ತಮ್ಮ ಜೀವಮಾನವೇ ದುಡಿದು ನಿವೃತ್ತಿಯಾದಾಗ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದಕ್ಕೆ ಬಹಳ ದುಸ್ತರವಾಗಿದೆ. ಹೀಗಾಗಿ ಪಿಂಚಣಿ ನೀಡಲು ಸರ್ಕಾರವೇ ಒಂದು ಆಯೋಗ ರಚನೆ ಮಾಡಿತ್ತು. ಆ ಸಮಿತಿಯು ವರದಿಯನ್ನು ಇಲಾಖೆಗೆ ನೀಡಿದೆ. ಆದರೆ ಜಾರಿಯಾಗಿಲ್ಲ. ತಕ್ಷಣ ಕನಿಷ್ಠ 6000 ರೂ. ಪಿಂಚಣಿ ಜಾರಿ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದರು.
ನಿರ್ದಿಷ್ಟ ಕಾಲಮಿತಿಯೊಳಗೆ ಎಲ್ಲಾ ನೌಕರರಿಗೆ ಅನುಮೋದನೆ ನೀಡುವಂತೆ ಸರ್ಕಾರದ ಆದೇಶವಿದ್ದರೂ ನೌಕರರಿಗೆ ಅನುಮೋದನೆ ಸಿಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ ಸರ್ಕಾರದ ಆದೇಶದಂತೆ 2017 ನವೆಂಬರ್ ತಿಂಗಳಿಗೂ ಮೊದಲು ನೇಮಕಗೊಂಡಿರುವ ಎಲ್ಲಾ ಗ್ರಾ.ಪಂ. ನೌಕರರಿಗೆ ಯಾವುದೇ ರೀತಿಯ ತಾರತಮ್ಯ ಮತ್ತು ವಿಳಂಬ ಮಾಡದೆ ಏಕಕಾಲದಲ್ಲಿ ನಿಯಮಾನುಸಾರ ಅನುಮೋದನೆ ನೀಡಿ ಘೋಷಣೆ ಮಾಡಬೇಕು. ಜತೆಗೆ ಅನುಕಂಪದ ಆದಾರದಲ್ಲಿ ನೇಮಕಗೊಂಡಿರುವವರಿಗೆ ಯಾವುದೇ ತಕರಾರು ಮಾಡದೆ ಸೌಲಭ್ಯ ನೀಡಬೇಕು. ಹಾಗೂ ನೌಕರರ ಅನುಮೋದನೆ ಪ್ರಸ್ತಾವನೆಗಳನ್ನು ಸಮರ್ಪಕವಾಗಿ ಒದಗಿಸದೆ ಬಾಕಿ ಉಳಿಸಿಕೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಜಿಲ್ಲಾ ಖಜಾಂಚಿ ಕುಮಾರಸ್ವಾಮಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಗ್ರಾ.ಪಂ. ನೌಕರರ ಮುಖಂಡರಾದ ಕರಿಯಪ್ಪ, ಅಶೋಕ ಅತ್ನಿ, ನಂದೀಶ್ ಹಾಗೂ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್, ಸೌಮ್ಯಾ, ಜಿ.ಪಿ.ಸತ್ಯನಾರಾಯಣ, ಎಂ.ಜಿ. ಪೃಥ್ವಿ ಮತ್ತುತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.