ನಾಲ್ಕನೇ ಕೂಳೆ ಕಬ್ಬಿನ ಸಿಹಿ

8rajesh6
Published on

ಚಾಮರಾಜನಗರ: ಸಾಮಾನ್ಯವಾಗಿ ಕಬ್ಬು ನಾಟಿ ಮಾಡಿದವರು ಹೆಚ್ಚೆಂದರೆ ಎರಡು ಅಥವಾ ಮೂರು ಕೂಳೆ ಬೆಳೆಯುತ್ತಾರೆ. ಆದರೆ ಇಲ್ಲೊಬ್ಬರು ನಾಲ್ಕನೇ ಕೂಳೆ ಕಬ್ಬಿನಲ್ಲೂ ಸಿಹಿ ಕಾಣುತ್ತಿದ್ದಾರೆ. ಜತೆಗೆ ಸಾವಯವ ವಿಧಾನದಲ್ಲಿ ಅಚ್ಚುಕಟ್ಟಾಗಿ ಕೃಷಿ ಮಾಡುತ್ತಿದ್ದಾರೆ. ದೇಸಿ ಬೀಜ ಸಂರಕ್ಷಣೆಯಲ್ಲೂ ತೊಡಗಿಕೊಂಡಿದ್ದಾರೆ.

ತಾಲೂಕಿನ ಹೆಗ್ಗೋಠಾರ ಗ್ರಾಮದ ರೈತ ಬಿ.ಗುರುಮಲ್ಲಪ್ಪ 75ರ ಇಳಿ ವಯಸ್ಸಿನಲ್ಲೂ ಛಲ ತೊಟ್ಟು ಯುವಕರಿಗೆ ಸರಿಸಮನಾಗಿ ಒಬ್ಬರೇ ಕೃಷಿ ಮಾಡುತ್ತಿದ್ದಾರೆ. ಗ್ರಾಮದಲ್ಲಿರುವ 3.25 ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ಕಬ್ಬು ಹಾಕಿದ್ದಾರೆ. ಇದು ನಾಲ್ಕನೇ ಕೂಳೆಯಾಗಿದ್ದು, ಕಬ್ಬು ಚೆನ್ನಾಗಿ ಬೆಳೆಯುತ್ತಿದೆ.

ಮೊದಲ ಕಬ್ಬು ಬೆಳೆದು ಇದರ ಕೂಳೆಯನ್ನು ಉಳಿಸಿಕೊಂಡು ಆರೈಕೆ ಮಾಡುವುದರಿಂದ ಮೊದಲ ಬೆಳೆಯ ಆಸುಪಾಸಿನಷ್ಟೇ ಇಳುವರಿಯನ್ನು ಪಡೆಯಬಹುದು. ಇದು ರೈತರಿಗೆ ಉಳುಮೆ, ಬಿತ್ತನೆ ಕಬ್ಬು, ಗೊಬ್ಬರ..ಹೀಗೆ ಬಂಡವಾಳ ಮತ್ತು ಕಾರ್ಮಿಕರ ಅವಶ್ಯಕತೆಯನ್ನು ಇಲ್ಲವಾಗಿಸುತ್ತದೆ. ಕಟಾವಾದ ಕಬ್ಬಿನಿಂದ ಮತ್ತೆ ಚಿಗುರೊಡೆಯುವ ಕಬ್ಬು ಬೇಗ ಕಟಾವಿಗೂ ಬರುತ್ತದೆ.

ಈ ವಿಧಾನವನ್ನು ಅನುಸರಿಸುತ್ತಿರುವ ರೈತ ಗುರುಮಲ್ಲಪ್ಪ ಮೊದಲ ಸಲ ಕಬ್ಬು ನೆಟ್ಟಾಗ 70 ಟನ್ ಇಳುವರಿ ಪಡೆದುಕೊಂಡಿದ್ದರು. ಮತ್ತೆ ಚಿಗುರಿದ ಕಬ್ಬಿನಿಂದ ಅಂದರೆ ಎರಡನೇ ಕೂಳೆಯಲ್ಲಿ 65 ಟನ್ ಕಬ್ಬು ಸಿಕ್ಕಿತ್ತು. ಮೂರನೇ ಕೂಳೆಯಲ್ಲಿ 60 ಟನ್ ಕಬ್ಬು ಬೆಳೆದು, ಈಗ ನಾಲ್ಕನೇ ಕೂಳೆ ಬೆಳೆಯುತ್ತಿದ್ದಾರೆ. ಇನ್ನೊಂದು ಕೂಳೆಯನ್ನು ಬಿಟ್ಟು ಕಬ್ಬು ಬೆಳೆಯಬೇಕೆಂದುಕೊಂಡಿದ್ದಾರೆ.

ಕೆಲವು ರೈತರು ಎರಡನೇ ಕೂಳೆಗೆ ಮುಕ್ತಾಯಗೊಳಿಸುತ್ತಾರೆ. ಕಬ್ಬಿನ ತರಗಿಗೆ ಬೆಂಕಿ ಹಾಕುತ್ತಾರೆ. ಆದರೆ ರೈತ ಗುರುಮಲ್ಲಪ್ಪ ತರಗಿಗೆ ಬೆಂಕಿ ಹಾಕುವುದಿಲ್ಲ. ಅದನ್ನು ಭೂಮಿಯಲ್ಲೇ ಬಿಟ್ಟು ಕೊಳೆಸುತ್ತಾರೆ. ತರಗಿಗೆ ಬೆಂಕಿ ಹಾಕುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳು ನಾಶವಾಗುತ್ತವೆ. ಹಾಗೆಯೇ ಬಿಟ್ಟು ಕೊಳೆಸುವುದರಿಂದ ಮಣ್ಣಿನ ಲವತ್ತತೆಯನ್ನು ಹೆಚ್ಚು ಮಾಡುತ್ತಿದೆ.

ಸಾವಯವ ವಿಧಾನದಲ್ಲಿ ಕಬ್ಬು ಕೃಷಿ:

ಸಾವಯವ ಕೃಷಿ ವಿಧಾನದಲ್ಲಿ ಕಬ್ಬು ಬೆಳೆಯುವ ಪ್ರಾತ್ಯಕ್ಷಿಕತೆಗೆ ರೈತ ಗುರುಮಲ್ಲಪ್ಪ ಅವರ ಜಮೀನು ಸೂಕ್ತ ಸ್ಥಳ. ಬಿ.ಎ, ಬಿ.ಇಡಿ ಮಾಡಿರುವ ಇವರು 50 ವರ್ಷಗಳ ಕೃಷಿ ಜೀವನದಲ್ಲಿ 1 ವರ್ಷವನ್ನು ಬಿಟ್ಟು ಉಳಿದಷ್ಟೂ ಕಾಲ ಸಾವಯವ ವಿಧಾನದಲ್ಲೇ ಕೃಷಿ ಮಾಡುತ್ತಿದ್ದಾರೆ. ಬೆಳೆ ಬೆಳೆಯುವ ರೀತಿ-ನೀತಿಗಳಲ್ಲೇ ವೈಜ್ಞಾನಿಕತೆಯನ್ನು ಅಳವಡಿಸಿಕೊಂಡಿದ್ದಾರೆ. ಪ್ರಸ್ತುತ 1 ಎಕರೆಯಲ್ಲಿ ಬೆಳೆದಿರುವ ಕಬ್ಬಿಗೆ ನೀರು ಕಟ್ಟುವ ವಿಧಾನದಲ್ಲಿ ಜಲ ನೀಡಲಾಗುತ್ತಿದೆ. ಹನಿ ನೀರಾವರಿ ಅಳವಡಿಸಿದ್ದರೆ ರೋಗ ಬಾಧಿಸುತ್ತದೆ. ನೀರು ಕಟ್ಟುವುದರಿಂದ ರೋಗ ಬರುವುದಿಲ್ಲ ಎನ್ನುವುದು ಇವರ ನಂಬಿಕೆ. ಇದಕ್ಕೆ ತಕ್ಕಂತೆ ಬೆಳೆಯೂ ನಳನಳಿಸುತ್ತಿದೆ.

ಇದಕ್ಕೆ ಗಂಜಲ, ತೊಪ್ಪೆ, ನೀರು ಮಿಶ್ರಣ ಮಾಡಿದ ತ್ರಿಮೂರ್ತಿ ಟಾನಿಕ್, 5 ಕೆ.ಜಿ. ಗಂಜಲ, 5 ಕೆ.ಜಿ ತೊಪ್ಪೆ,, 100 ಗ್ರಾಂ ತುಪ್ಪ, 2 ಎಳನೀರು, ನೀರು ಹಾಕಿ ಒಂದು ಡ್ರಮ್‌ನಲ್ಲಿ 7 ದಿನ ಕೊಳೆಸಿ ತಯಾರಿಸಿದ ಪಂಚಗವ್ಯ ಮತ್ತು ಆರ್.ಕೆ.ದ್ರಾವಣವನ್ನು 15 ದಿನಗಳಿಗೆ ಒಮ್ಮೆ ಕಬ್ಬಿಗೆ ಹಾಯಿಸುವ ನೀರಿನೊಂದಿಗೆ ಮಿಶ್ರಣ ಮಾಡುತ್ತಿದ್ದಾರೆ. ನಾಲ್ಕನೇ ಕೂಳೆ ಕಬ್ಬು ಉತ್ತಮವಾಗಿ ಬೆಳೆಯುತ್ತಿದೆ. ಹಸಿರಿನಿಂದ ನಳನಳಿಸುತ್ತಿದೆ.

ಕಲ್ಪವೃಕ್ಷಗಳ ತೋಟ:

ರೈತ ಗುರುಮಲ್ಲಪ್ಪ ಅವರ ಜಮೀನಿನಲ್ಲಿ 100 ತೆಂಗಿನ ಮರಗಳಿವೆ. 60 ಸಸಿಗಳಿವೆ. ಇವುಗಳಿಗೂ ಸಹ ನೀರು ಕಟ್ಟುವ ವಿಧಾನದಲ್ಲೇ ಜಲ ನೀಡುತ್ತಿದ್ದಾರೆ. ತ್ರಿಮೂರ್ತಿ ಟಾನಿಕ್, ಪಂಚಗವ್ಯ ಇನ್ನಿತರೆ ಸಾವಯವ ದ್ರಾವಣಗಳನ್ನು ಸಿಂಪಡಿಸಿದ್ದಾರೆ. 100 ತೆಂಗಿನ ಮರಗಳು ಎತ್ತರಕ್ಕೆ ಬೆಳೆದಿವೆ. ಉತ್ತಮ ಇಳುವರಿ ನೀಡುತ್ತಿವೆ. ಇದರೊಂದಿಗೆ 1 ಕಿರಳಿಕಾಯಿ ಗಿಡ, 3 ನಿಂಬೆಹಣ್ಣಿನ ಗಿಡಗಳು, 1 ಮಾವಿನ ಮರ, ಹುಣಸೆ ಮರ, ನುಗ್ಗೆ ಇವೆ.

ಬೀಜ ಸಂರಕ್ಷಣೆ:

ಹೈಬ್ರಿಡ್ ಬೀಜಗಳನ್ನು ಬಿತ್ತಿ ಅದರಷ್ಟೇ ಪ್ರಮಾಣದ ಇಳುವರಿ ತೆಗೆದಿದ್ದ ರೈತ ಗುರುಮಲ್ಲಪ್ಪ ಮತ್ಯಾವತ್ತೂ ಹೈಬ್ರಿಡ್ ಬಿತ್ತನೆ ಬೀಜದ ಸಹವಾಸ ಮಾಡಲಿಲ್ಲ. ಬದಲಾಗಿ ಅವರೇ ದೇಸಿ ಬೀಜಗಳನ್ನು ಸಂರಕ್ಷಣೆ ಮಾಡಿದ್ದಾರೆ. ತೊಗರಿ, ಕಡಲೆ, ಅವರೆ, ಉರುಳಿ ಇನ್ನಿತರೆ ಬೀಜಗಳನ್ನು ಸಂರಕ್ಷಣೆ ಮಾಡಿ ಬಳಕೆ ಮಾಡುತ್ತಿದ್ದಾರೆ. ಉಳಿದ ಬಿತ್ತನೆ ಬೀಜವನ್ನು ಬೇರೆ ರೈತರಿಗೂ ನೀಡುತ್ತಿದ್ದಾರೆ.

ರೈತರಿಗೆ ಪಾಠ ಮಾಡುವ ‘ಗುರು’: ಸಾವಯವ ವಿಧಾನದಲ್ಲಿ ಕೃಷಿ ಮಾಡುವ ರೈತರಿಗೆ ಗುರುಮಲ್ಲಪ್ಪ ಪಾಠ ಮಾಡುವ ಗುರುವಿದ್ದಂತೆ. ಇಕ್ರಾ ಸಂಸ್ಥೆಯ ಮಾರ್ಗದರ್ಶನ ಪಡೆದು, ಪ್ರಾಯೋಗಿಕವಾಗಿ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಈ ಅನುಭವವು ಗುರುಮಲ್ಲಪ್ಪಗೆ ಅಪಾರ ಜ್ಞಾನವನ್ನು ನೀಡಿದೆ. ಕೃಷಿ ತರಬೇತಿಗಳಲ್ಲಿ ರೈತರಿಗೆ ಸಲಹೆಗಳನ್ನು ನೀಡುತ್ತಾರೆ. ಇಳಿ ವಯಸ್ಸಿನಲ್ಲೂ ಇವರು ಕೃಷಿಯ ಮೇಲೆ ಇಟ್ಟುಕೊಂಡಿರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಗುರುಮಲ್ಲಪ್ಪ ಅವರ ಕೃಷಿ ಸೇವೆಯನ್ನು ಸರ್ಕಾರ ಗುರುತಿಸಿ ಗೌರವಿಸಬೇಕಾಗಿದೆ.

ಕೂಳೆ ಕಬ್ಬಿನಲ್ಲೂ ಉತ್ತಮ ಇಳುವರಿ ಸಿಗುತ್ತಿದೆ. ಎಲ್ಲ ರೈತರೂ ಮಾಗಿ ಉಳುಮೆ ಮಾಡಬೇಕು. ಮಕ್ಕಳು ಭವಿಷ್ಯದಲ್ಲಿ ಅನ್ನವನ್ನು ಹೇಗೆ ಹುಟ್ಟಿಸಿಕೊಳ್ಳಬೇಕೆಂದು ಹೇಳಿಕೊಡುವ ಶಾಲೆಗಳು ಭತ್ತವನ್ನು ಹೇಗೆ ಬೆಳೆಯುತ್ತಾರೆ ಎನ್ನುವುದನ್ನೂ ತಿಳಿಸಿಕೊಡಬೇಕು. ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆ, ಲಾಭ ಹೆಚ್ಚಾಗಿದೆ. ರಾಸಾಯನಿಕ ಬಳಕೆಯಿಂದ ನಷ್ಟವಾಗುತ್ತದೆ. ಭವಿಷ್ಯದಲ್ಲಿ ಆಹಾರಕ್ಕೆ ಸಮಸ್ಯೆಯಾಗುತ್ತದೆ. ಇದನ್ನು ತಪ್ಪಿಸಲು ಸಾವಯವ ಪದ್ಧತಿಯನ್ನು ಅನುರಿಸಬೇಕು. ಬಿ.ಗುರುಮಲ್ಲಪ್ಪ, ಪ್ರಗತಿ ಪರ ರೈತ, ಹೆಗ್ಗೋಠಾರ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net