

ಕೆ.ಆರ್.ಸಾಗರ: ಸಮೀಪದ ನಾರ್ತ್‌ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೂರು ವರ್ಷದ ಬಾಲಕನನ್ನು ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಎಂ.ವೈ.ಅಭಿಲಾಷ್ 3 ಸಾವಿರ ಕ್ಯೂಸೆಕ್‌ನಷ್ಟು ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೆ ಈಜಿ ಗುರುವಾರ ರಕ್ಷಿಸಿದ್ದಾರೆ.
ಬೆಂಗಳೂರು ಮೂಲದ ಸಾಮ್ರಾಟ್ ಬದುಕುಳಿದ ಬಾಲಕ. ಪಾಲಕರೊಂದಿಗೆ ಪ್ರವಾಸ ಬಂದಿದ್ದ ಬಾಲಕ ನಾರ್ತ್‌ಬ್ಯಾಂಕ್ ಕಾಳಮ್ಮ ದೇವಸ್ಥಾನದ ಬಳಿಯ ವಿಶ್ವೇಶ್ವರಯ್ಯ ನಾಲೆಯ ಮೆಟ್ಟಿಲುಗಳ ಬಳಿ ನಾಲೆಯ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಾಲೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಇದನ್ನು ಕಂಡು ತಾಯಿ ಮಗುವಿನ ರಕ್ಷಣೆಗೆ ಕೂಗಿಕೊಂಡಿದ್ದಾರೆ.
ಉತ್ತರ ಬೃಂದಾವನದಲ್ಲಿ ಕರ್ತವ್ಯ ಮುಗಿಸಿ ಊಟಕ್ಕೆಂದು ಮನೆಗೆ ಸ್ಕೂಟರ್‌ನಲ್ಲಿ ಹೋಗುವ ಸಂದರ್ಭದಲ್ಲಿ ತಾಯಿಯ ಚೀರಾಟವನ್ನು ಆಲಿಸಿದ ಕಿರಿಯ ಇಂಜಿನಿಯರ್ ಅಭಿಲಾಷ್ ನಾಲೆಗೆ ಹಾರಿ ಬಾಲಕನನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ಸಹ ನೀಡಿದ್ದಾರೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇವರ ಸಹಾಯ ಮತ್ತು ರಕ್ಷಣೆಗೆ ಮಗುವಿನ ಪಾಲಕರು ಧನ್ಯವಾದ ತಿಳಿಸಿದ್ದು, ಮತ್ತು ಸ್ಥಳದಲ್ಲಿದ್ದ ಪ್ರವಾಸಿಗರು ಅಭಿಲಾಷ್ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಭಿಲಾಷ್ ಉತ್ತಮ ಕಾರ್ಯಕ್ಕೆ ಕೆ.ಆರ್. ಸಾಗರ ಕಾವೇರಿ ನೀರಾವರಿ ನಿಗಮದ ಇಇ ರಾಮಮೂರ್ತಿ, ಎಇಇಗಳಾದ ಫಾರೂಕ್ ಅಭು, ಕಿಶೋರ್‌ಕುಮಾರ್, ರಶ್ಮಿ ಮತ್ತು ಇಂಜಿನಿಯರ್‌ಗಳು, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.