ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರಿಂದ ಕಾಡಾ ಕಚೇರಿ ಮುಂದೆ ಪ್ರತಿಭಟನೆ

20
Published on

ಮೈಸೂರು: ಬೆಳೆಗಳು ಒಣಗುತ್ತಿರುವುದರಿಂದ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ನಗರದ ಕಾಡಾ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ಮಾಡಲಾಯಿತು.
ಬೆಳೆದು ನಿಂತಿರುವ ಕಬ್ಬು, ಬಾಳೆ, ತೆಂಗು ಇತರ ಬೆಳೆಗಳನ್ನು ರಕ್ಷಿಸಬೇಕು. ನೀರಿಲ್ಲದೆ ಒಣಗುತ್ತಿದ್ದು, ರೈತರು ಆತಂಕಗೊಂಡಿದ್ದಾರೆ. ಆದ್ದರಿಂದ ಕಬಿನಿ, ಕಾವೇರಿ ಅಚ್ಚುಕಟ್ಟು ನಾಲೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಕೋರಿದರು.
ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಬರಗಾಲದ ಬೇಗೆಯಿಂದ ಬೆಳೆಗಳು ಒಣಗಿ ಹಾಳಗುತ್ತಿವೆ. ಕೆರೆ ಕಟ್ಟೆಗಳು ಒಣಗಿ ಹೋಗಿವೆ. ದನಕರುಗಳಿಗೆ ಕುಡಿಯಲು ನೀರಿಲ್ಲ, ಕೂಡಲೇ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.
ಇಂಥ ಸಂಕಷ್ಟದಲ್ಲಿ ಸಮುದ್ರಕ್ಕೆ ಹರಿಯುವ ಹೆಚ್ಚುವರಿ ನೀರು ಬಳಸಿಕೊಳ್ಳಲು ಮೇಕೆದಾಟು ಬಳಿ ಅಣೆಕಟ್ಟೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಬಜೆಟ್‌ನಲ್ಲಿ ಕೃಷಿ, ನೀರಾವರಿ ಹಾಗೂ ಸಹಕಾರ ಇಲಾಖೆಗಳಿಗೆ ಸುಮಾರು 11 ಸಾವಿರ ಕೋಟಿ ರೂ. ಅನುದಾನ ಕಡಿತ ಮಾಡಿರುವುದು ರೈತರಿಗೆ ಘೋರ ಅನ್ಯಾಯ ಮಾಡಿದಂತಾಗಿದೆ. ಅನ್ನಭಾಗ್ಯ ಯೋಜನೆಗೆ ರೈತರ ಭತ್ತ, ರಾಗಿ, ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಜತೆಗೆ ಪ್ರೋತ್ಸಾಹ ಧನ ನೀಡುವ ಮೂಲಕ ಖರೀದಿಸಬೇಕು. ಈ ಮೂಲಕ ರೈತರ ಹಿತಾಸಕ್ತಿ ಕಾಪಾಡಲಿ ಎಂದರು
ಬೆಳೆಗಳನ್ನು ಉಳಿಸಲು ನಾಳೆಯಿಂದ ಆರ್‌ಆರ್‌ಬಿಎಲ್ ನಾಲೆಗೆ ನೀರು ಹರಿಸುವುದಾಗಿ ಮುಖ್ಯಇಂಜಿನಿಯರ್ ವೆಂಕಟೇಶ್ ಅವರು ದೂರವಾಣಿ ಮೂಲಕ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
ಸಂಘದ ಅತ್ತಹಳ್ಳಿ ದೇವರಾಜ್, ಪಿ. ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ, ವೆಂಕಟೇಶ್, ಸಿದ್ದೇಶ್, ಶ್ರೀರಾಮ್. ಮಂಜುನಾಥ್, ಮಹದೇವಸ್ವಾಮಿ ರಂಗರಾಜು, ಸಿದರಾಮು ಶಿವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net