

ಕಿಕ್ಕೇರಿ: ಹೋಬಳಿಯ ರೈತರು ಹೇಮಾವತಿ ನಾಲೆ ನಂಬಿ ಬದುಕುತ್ತಿದ್ದು, ಕೂಡಲೇ ನಾಲೆಯಲ್ಲಿ ನೀರು ಬಿಡಲು ಅಧಿಕಾರಿಗಳು ಮುಂದಾಗುವಂತೆ ಎಂದು ಶಾಸಕ ಎಚ್.ಟಿ. ಮಂಜು ತಾಕೀತು ಮಾಡಿದರು.
ಹೋಬಳಿಯ ಗೋವಿಂದನಹಳ್ಳಿ, ಊಗಿನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಹಾದು ಹೋಗಿರುವ ನಾಲೆಯನ್ನು ಇತ್ತೀಚೆಗೆ ವೀಕ್ಷಣೆ ಮಾಡಿ ಮಾತನಾಡಿ, ನಾಲೆ ನೀರು ನಂಬಿ ರೈತರು ರಾಗಿ, ಹುರುಳಿ ಮತ್ತಿತರ ಬೆಳೆ ಬಿತ್ತನೆ ಮಾಡಿದ್ದಾರೆ. ಮಳೆಗಾಲದಲ್ಲಿಯೂ ನಾಲೆಯಲ್ಲಿ ನೀರು ಹರಿಯದಾಗಿದೆ. ಹೇಮಾವತಿ ಎಡದಂಡೆ ನಾಲೆಯ ಶ್ರವಣಬೆಳಗೊಳ ಉಪವಿಭಾಗದ ಅಧಿಕಾರಿಗಳು ಸಬೂಬು ಹೇಳುತ್ತ ಕಾಲಹರಣ ಮಾಡಿದ್ದಾರೆ. ರೈತರು ಸಂಕಷ್ಟದಲ್ಲಿದ್ದು, ಬಿತ್ತಿರುವ ಬೀಜ ಮೊಳಕೆಯೊಡೆಯದೆ ಒಣಗುತ್ತಿದೆ. ಕಟ್ಟು ನೀರು ಪದ್ಧತಿಯಲ್ಲಿಯಾದರೂ ನೀರು ಬಿಟ್ಟಿದ್ದರೆ ರೈತ ಬದುಕಿಕೊಳ್ಳಬಹುದಾಗಿದೆ ಎಂದರು.
ವಾರದೊಳಗೆ ನಾಲೆಗೆ ನೀರು ಹರಿಸಿ ಕೆರೆಕಟ್ಟೆಗಳು ತುಂಬಿಕೊಳ್ಳುವ ವ್ಯವಸ್ಥೆ ಮಾಡಬೇಕು. ರೈತರು ಬೀದಿಗಿಳಿಯುವ ಮುನ್ನ ಸೂಕ್ತ ಕ್ರಮವಹಿಸಬೇಕು ಎಂದು ಹೇಳಿದರು. ಹೋಬಳಿಯ ವಿವಿಧ ಗ್ರಾಮಗಳ ರೈತರು, ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.