

ಕೆ.ಆರ್.ಸಾಗರ: ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ನಾಲೆಗಳಿಗೆ ನೀರು ಹರಿಸುವ ಕುರಿತು 24 ಗಂಟೆಯೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಕೆ.ಆರ್.ಸಾಗರದ ಬೃಂದಾವನದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 2023-24 ನೇ ಸಾಲಿನ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ, ಪ್ರಸ್ತುತ ನೀರಿನ ಸಂಗ್ರಹ, ಬಳಕೆಗೆ ಇರುವ ನೀರಿನ ಲಭ್ಯತೆ, ಬೆಳೆಗಳಿಗೆ ಬೇಕಾದ ನೀರಿನ ಪ್ರಮಾಣ ಕುರಿತು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಚಲುವರಾಯಸ್ವಾಮಿ, ಶಾಸಕರ ಆಭಿಪ್ರಾಯ ಪಡೆಯಲಾಗಿದೆ. ಸಿಎಂ, ಜಲ ಸಂಪನ್ಮೂಲ ಸಚಿವರ ಜತೆ ಚರ್ಚಿಸಿ ಕೆ.ಆರ್.ಸಾಗರ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವ ಬಗ್ಗೆ ನಿರ್ಣಯಿಸಲಾಗುವುದು ಎಂದರು.
ಪ್ರಸ್ತುತ ಅಣೆಕಟ್ಟೆಯಲ್ಲಿ 113 ಅಡಿ ನೀರಿನ ಸಂಗ್ರಹವಿದ್ದು, ಸರ್ಕಾರ ರಚನೆಯಾದ ನಂತರ ಪ್ರಥಮ ಬಾರಿಗೆ ನೀರಾವರಿ ಸಮಿತಿ ಸಭೆ ನಡೆಸಲಾಗಿದೆ. ಕೃಷ್ಣರಾಜಸಾಗರ ಅಣೆಕಟ್ಟೆ ವ್ಯಾಪ್ತಿಯ ಶಾಸಕರು, ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಚರ್ಚಿಸಲಾಗಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶೀಘ್ರ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಸುಪ್ರೀಂಕೋರ್ಟ್ ತೀರ್ಪು ಗಮನದಲ್ಲಿಟ್ಟುಕೊಂಡು ರೈತರ ಹಿತ ಕಾಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸುಪ್ರೀಂಕೋರ್ಟ್ ಆದೇಶದ ಪರಿಮಿತಿಯಲ್ಲಿ ನೀರು ಬಿಡಬೇಕಾಗಿದೆ. ನಾಲೆಗಳಿಗೆ ನೀರು ಹರಿಸಬೇಕಾದ ಕುರಿತು ಸಮಿತಿ ಅಧ್ಯಕ್ಷ ಚಲುವರಾಯಸ್ವಾಮಿ ನೇತೃತ್ವದಲ್ಲಿ ಚರ್ಚಿಸಿದ್ದೇವೆ ಎಂದರು.
ನಮ್ಮದು ಬಂಡೆ ರೀತಿಯ ಸರ್ಕಾರ
ನೀರಾವರಿ ಸಲಹಾ ಸಮಿತಿ ಸಭೆಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಶಾಸಕ ಜಿ.ಟಿ.ದೇವೇಗೌಡ ಒಂದೇ ಕಾರಿನಲ್ಲಿ ಆಗಮಿಸಿದರು. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್.ಸಿ.ಮಹದೇವಪ್ಪ, ಜತೆಯಲ್ಲಿ ಬಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಕೃಷಿ ಸಚಿವರ ಬಗ್ಗೆ ಮಂಡ್ಯ ಜಿಲ್ಲೆಯ 7 ಕೃಷಿ ಅಧಿಕಾರಿಗಳು ನೀಡಿರುವ ದೂರಿನ ಕುರಿತು ನನಗೆ ಗೊತ್ತಿಲ್ಲ. ಪದೇ ಪದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಸಾಕ್ಷೃ ಕೊಟ್ಟರೆ ತನಿಖೆ ಮಾಡುತ್ತೇವೆ. ಅವರು ಸೋಲಿನಿಂದ ಹತಾಶರಾಗಿದ್ದು ನಾವು ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸುಮ್ಮನೆ ಹಿಟ್ ಆ್ಯಂಡ್ ರನ್ ಹಾಗೆ ಮಾತನಾಡುತ್ತಾರೆ. ನಮ್ಮದು ಬಂಡೆ ರೀತಿಯ ಸರ್ಕಾರ ಎಂದರು.