

ಮದ್ದೂರು: ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಸಮೀಪ ಒಳಚರಂಡಿ ನೀರು ಭಾರಿ ಪ್ರಮಾಣದಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ವೃದ್ಧರು, ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಈ ವೇಳೆ ಒಳಚರಂಡಿ ನೀರನ್ನು ತುಳಿದು ಹೋಗಬೇಕಾದ ಅನಿವಾರ್ಯ ಸ್ಥಿತಿಯ ಜತೆಗೆ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಸುಮಾರು ಅರ್ಧ ಕಿಮೀ ದೂರ ಒಳಚರಂಡಿ ನೀರು ಹರಿಯುವುದರಿಂದ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಮತ್ತು ಪಾದಚಾರಿಗಳು ಇದರಿಂದ ತೊಂದರೆ ಅನುಭವಿಸಬೇಕಾಗಿದೆ.
ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಳಚರಂಡಿ ನೀರು ಹೆದ್ದಾರಿಯಲ್ಲಿ ಹರಿದಾಗ ಪಾಲಕರು ತಮ್ಮ ಮಕ್ಕಳನ್ನು ಎತ್ತಿಕೊಂಡು ಹೋಗಬೇಕು. ಜತೆಗೆ ವಾಹನಗಳು ರಭಸವಾಗಿ ಬಂದಾಗ ಹೋದಾಗ ಕಲುಷಿತ ನೀರು ಮೈ ಮೇಲೆ ಹಾರಿರುವ ಪ್ರಸಂಗವೂ ಉಂಟು. ಇದರಿಂದ ಕೆಲಸಕ್ಕೆ ಹೋಗುವವರು ಶಾಪ ಹಾಕುವುದು ಸಾಮಾನ್ಯವಾಗಿದೆ.
ಹೆದ್ದಾರಿ ಪಕ್ಕದಲ್ಲಿ ಹಲವಾರು ಹೋಟೆಲ್‌ಗಳು, ಬೇಕರಿ, ಹಣ್ಣಿನ ಅಂಗಡಿಗಳು, ಗ್ಯಾರೇಜ್‌ಗಳು ಸೇರಿದಂತೆ ಇತರ ಅಂಗಡಿಗಳು ಇರುವುದರಿಂದ ಗ್ರಾಹಕರು ಕಲುಷಿತ ನೀರನ್ನು ದಾಟಿ ಬರದಿರುವ ಪರಿಸ್ಥಿತಿ ಇದೆ. ಜತೆಗೆ ಹೋಟೆಲ್‌ಗಳಲ್ಲಿ ಗಬ್ಬುವಾಸನೆಯನ್ನು ಸಹಿಸಿಕೊಂಡು ತಿಂಡಿ, ಊಟ ತಿನ್ನಬೇಕಾದ ಅನಿವಾರ್ಯತೆ ಎದುರಾಗಿದೆ. ಪರಿಣಾಮ ವ್ಯಾಪಾರವಾಗದೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಹಲವಾರು ಬಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ವ್ಯಾಪಾರಿಗಳ ಅಳಲು.
ಕೆಮ್ಮಣ್ಣು ನಾಲೆಗೆ ಸೇರುತ್ತಿದೆ ಒಳಚಂಡಿ ನೀರು: ಒಳಚರಂಡಿ ನೀರು ಭಾರಿ ಪ್ರಮಾಣದಲ್ಲಿ ಕೆಮ್ಮಣ್ಣು ನಾಲೆಗೆ ಸೇರುತ್ತಿದೆ. ಅಲ್ಲದೆ ಕೊಳಕು ನೀರು ಪಟ್ಟಣ, ಚನ್ನಸಂದ್ರ, ನಗರಕೆರೆ ಸೇರಿದಂತೆ ಹಲವಾರು ಗ್ರಾಮಗಳಿಗೆ ಕಾಲುವೆ ಹಾಗೂ ನದಿ ನೀರಿನೊಂದಿಗೆ ಸೇರಿ ಹರಿಯುತ್ತಿದ್ದು, ರೈತರು ವ್ಯವಸಾಯಕ್ಕೆ ಇದೇ ನೀರನ್ನು ಬಳಸುತ್ತಿದ್ದಾರೆ. ಇದರಿಂದ ಚರ್ಮರೋಗ ಕಾಣಿಸಿಕೊಳ್ಳುವುದರ ಜತೆಗೆ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕ್ರಮ ವಹಿಸದಿರುವುದು ದುರಂತವೇ ಸರಿ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಈಗಾಗಲೇ ಗಂಟು ಮೂಟೆ ಕಟ್ಟಿಕೊಂಡು ಹೋಗಿರುವುದರಿಂದ ಈ ಸಮಸ್ಯೆಯನ್ನು ಬಗೆಹರಿಸುವವರು ಯಾರು ಎಂಬುವುದು ಯಕ್ಷಪ್ರಶ್ನೆಯಾಗಿದೆ. ಅವಘಡ ಸಂಭವಿಸುವ ಮುನ್ನ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡು ಒಳಚರಂಡಿ ನೀರು ರಸ್ತೆ ಮೇಲೆ ಹರಿಯುವುದನ್ನು ತಡೆಯುವಂತೆ ಮಾಡುವ ಮೂಲಕ ಅನುಕೂಲ ಕಲ್ಪಿಸಿ ಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯ.
ಸರ್ಕಾರಿ ಬಸ್ ನಿಲ್ದಾಣ ಸಮೀಪ ಒಳಚರಂಡಿ ನೀರು ಹರಿಯುತ್ತಿರುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಒಳಚರಂಡಿ ನೀರು ಸುಗಮವಾಗಿ ಹರಿಯುವಂತೆ ಮಾಡಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಟಿ.ಎನ್.ನರಸಿಂಹಮೂರ್ತಿ ತಹಸೀಲ್ದಾರ್
ಒಳಚರಂಡಿ ನೀರು ಹೋಟೆಲ್ ಮುಂದೆ ಹರಿಯುತ್ತಿರುವುದರಿಂದ ಗ್ರಾಹಕರು ಹೋಟೆಲ್‌ಗೆ ಬಂದು ತಿಂಡಿ ಹಾಗೂ ಊಟ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ನಿತ್ಯ ನಮಗೆ ಸಾವಿರಾರು ರೂ. ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ದೂರು ನೀಡಿದರೂ ಯಾರೂ ಕೂಡ ಗಮನಹರಿಸದಿರುವುದು ನಮಗೆ ತಲೆ ನೋವಾಗಿ ಪರಿಣಮಿಸಿದೆ.
ರಾಘವೇಂದ್ರ ಹೋಟೆಲ್ ಮಾಲೀಕ ಮಾನಸ ಉಪಹಾರ
ಹೆದ್ದಾರಿಯಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದರಿಂದ ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘದ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು.
ಉಮೇಶ್ ರೈತ ಸಂಘದ ಮುಖಂಡ ವಳಗೆರೆಹಳ್ಳಿ.