ನಾಲೆ ಕಾಮಗಾರಿ ಹೆಸರಿನಲ್ಲಿ ರೈತರಿಗೆ ಅನ್ಯಾಯ

9KMD-2
ರೈತರ ಬೆಳೆಗೆ ನೀರು ಹರಿಸದೆ ನಾಲೆಯ ಕಾಮಗಾರಿಗೆ ಹೆಸರಿನಲ್ಲಿ ರೈತರ ಬೆಳೆಗಳು ಒಣಗುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಕೆ.ಎಂ.ದೊಡ್ಡಿ: ರೈತರ ಬೆಳೆಗೆ ನೀರು ಹರಿಸದೆ ನಾಲೆಯ ಕಾಮಗಾರಿ ಹೆಸರಿನಲ್ಲಿ ಕಾವೇರಿ ನೀರಾವರಿ ನಿಗಮ ರೈತರ ಜೀವನದ ಜತೆ ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸರ್ ಎಂ. ವಿಶ್ವೇಶ್ವರಯ್ಯ ವೃತ್ತದಲ್ಲಿ ಸಂಘಟನೆ ಮತ್ತು ಸಮನ್ವಯ ಸಮಿತಿಯ ನೂರಾರು ಕಾರ್ಯಕರ್ತರು, ರಸ್ತೆ ಸಂಚಾರ ತಡೆ ನಡೆಸಿ ಮಾನವ ಸರಪಳಿ ರಚಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸುಮಾರು ಅರ್ಧಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಪರಿಣಾಮ ವಾಹನ ಸವಾರರು ಪರದಾಡಿದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ ಮಾತನಾಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿ.ಸಿ. ನಾಲೆ ಮತ್ತು ಲೋಕಸರ ನಾಲೆಯ ಆಧುನೀಕರಣ ಕಾಮಗಾರಿ ನೆಪದಲ್ಲಿ ಕೊನೆಭಾಗದ ರೈತರಿಗೆ ನೀರನ್ನು ನೀಡದೆ ವಂಚಿಸಿದ್ದಾರೆ. ರೈತರಿಗೆ ಮುಂಗಾರು ಆರಂಭವಾಗಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಲು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಲಾ ವ್ಯಾಪ್ತಿಯಲ್ಲಿ ಈಗಾಗಲೇ ಬೆಳದಿರುವ ಕಬ್ಬು ನಿರಲ್ಲದೆ ಒಣಗುತ್ತಿದೆ. ಕೂಡಲೇ ಅಧಿಕಾರಿಗಳು ನೀರು ಬಿಡಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಗತಿಪರ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಪ್ರೊ.ಬಿ.ಎಸ್. ಬೋರೇಗೌಡ ಮಾತನಾಡಿ, ರಾಜ್ಯದಲ್ಲಿ ವರುಣನ ಕೃಪೆಯಿಂದ ಈ ಬಾರಿ ಕೆಆರ್‌ಎಸ್ ಅಣೆಕಟ್ಟು ಇತಿಹಾಸದಲ್ಲೇ ಮೊದಲು ಅವಧಿಗೂ ಮುನ್ನವೇ ಭರ್ತಿಯಾಗಿದೆ. ಆದರೂ ರೈತರ ಕೃಷಿ ಚಟುವಟಿಕೆಯ ಉಪಯೋಗಕ್ಕೆ ಬಾರದಂತೆ ಆಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾಮಗಾರಿಯ ಹೆಸರಿನಲ್ಲಿ ರೈತರ ಬೆಳೆಗಳಿಗೆ ನೀರು ಕೃತಕ ಬರಗಾಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಕಾಮಗಾರಿ ಹೆಸರಿನಲ್ಲಿ ರೈತರಿಗೆ ನೀರು ನೀಡದೆ ಅನ್ಯಾಯ ಎಸಗುತ್ತಿದ್ದಾರೆ. ಅಲ್ಲದೆ ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು ರೈತರ ಬೆಳೆಗಳಿಗೆ ನೀರು ಹರಿಸಲು ಸೂಚಿಸಿದ್ದರು. ಅಧಿಕಾರಿಗಳು ನೀರು ಹರಿಸಲು ಮುಂದಾಗದಿರುವುದರಿಂದ ರೈತರ ಕಬ್ಬಿನ ಬೆಳೆ ಒಣಗುತ್ತಿದ್ದು, ಮುಂಗಾರು ಕೃಷಿ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ನೀರಾವರಿ ನಿಗಮದ ಅಧಿಕಾರಿಗಳು ಕೂಡಲೇ ವಿ.ಸಿ ನಾಲೆ ಹಾಗೂ ಲೋಕಸರ ನಾಲೆಗಳ ಮೂಲಕ ಕೊನೆಭಾಗಕ್ಕೆ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೆಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಕನ್ನಡಪರ ಹೋರಾಟಗಾರ ವಿ.ಸಿ. ಉಮಾಶಂಕರ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ರೈತ ಮುಖಂಡ ಸೋ.ಶಿ.ಪ್ರಕಾಶ್, ತಾಲೂಕು ಘಟಕದ ಅಧ್ಯಕ್ಷ ಪ್ರಭುಲಿಂಗ, ಪ್ರಗತಿಪರ ಸಂಘಟನೆಯ ಕೆ.ಪಿ.ದೊಡ್ಡಿ ಶಿವರಾಮು, ಕರಡಕೆರೆ ಯೋಗೇಶ್, ರಘು ವೆಂಕಟೇಗೌಡ, ಹಿಂದುಪರ ಮುಖಂಡರಾದ ಅಣ್ಣೂರು ಮನೋಹರ್, ಗಿರೀಶ್, ರೈತಮುಖಂಡರಾದ ಅಣ್ಣೂರು ಸಿದ್ದೇಗೌಡ, ಬೋರೇಗೌಡ, ರಾಮಲಿಂಗೇಗೌಡ, ಕೆ.ಪಿ ದೊಡ್ಡಿ ಪುಟ್ಟಸ್ವಾಮಿ, ಕೀಳಗಟ್ಟ ನಂಜುಡಯ್ಯ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net