ನಾಲಾಕ್ಕೆ ಬಿದ್ದ ಇಬ್ಬರ ಶವ ಪತ್ತೆ

h23- Kiresur Nala 1
Published on

ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಬಳಿಯ ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ಶುಕ್ರವಾರ ಬಿದ್ದು ನೀರು ಪಾಲಾಗಿದ್ದ ಮೂವರ ಪೈಕಿ ಶನಿವಾರ ಬೆಳಗ್ಗೆ ಇಬ್ಬರ ಶವ ಪತ್ತೆಯಾಗಿದೆ. ನಗರದ ಸನ್ನಿ ಜಾನ್ಸನ್ ಕಲ್ಲಕುಂಟ್ಲ, ಗಜಾನನ ರಾಜಶೇಖರ ಎಂಬುವವರ ಶವ ಪತ್ತೆಯಾಗಿವೆ. ಜೋಶ್ ಕ್ಲೆಮೆಂಟ್ ಜಂಗಮ ಎಂಬುವವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೋಟೋ ಶೂಟ್​ಗೆ ಹೋಗಿದ್ದ ಯುವಕರ ತಂಡದ ಮೇಲೆ ಹೆಜ್ಜೇನು ದಾಳಿ ಮಾಡಿದ್ದರಿಂದ ಪಕ್ಕದ ಕಾಲುವೆಗೆ ಹಾರಿದ್ದರು. ಅಗ್ನಿಶಾಮಕ ದಳ ಹಾಗೂ ಗ್ರಾಮೀಣ ಪೊಲೀಸರು ಶುಕ್ರವಾರ ತಡರಾತ್ರಿವರೆಗೆ ಶೋಧ ಕಾರ್ಯಾಚರಣೆ ನಡೆಸಿ, ಕತ್ತಲಾಗಿದ್ದರಿಂದ ಕೈಬಿಟ್ಟಿದ್ದರು. ಶನಿವಾರ ಬೆಳಗ್ಗೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಅಣ್ಣಿಗೇರಿಯ ಬಸಾಪುರ ಕಾಲುವೆ ಗೇಟ್ ಬಳಿ ಶವ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬನಿಗಾಗಿ ಭಾನುವಾರ ಶೋಧ ನಡೆಸಲಾಗುವುದು ಎಂದು ಗ್ರಾಮೀಣ ಠಾಣೆ ಇನ್​ಸ್ಪೆಕ್ಟರ್ ರಮೇಶ ಗೋಕಾಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net