ನಾಲಾ ಮೇಲೆ ಬರಲಿದೆ ಗ್ರೀನ್ ಕಾರಿಡಾರ್

h12-Nala
Published on

ಹುಬ್ಬಳ್ಳಿ: ನಗರದಲ್ಲಿ ಹೂಳು ತುಂಬಿದ ರಾಜಕಾಲುವೆ, ಗಬ್ಬೆದ್ದು ನಾರುವ ಕೊಳಚೆ ಇದೆಲ್ಲವೂ ಕೆಲವೇ ತಿಂಗಳಲ್ಲಿ ಮರೆಯಾಗಲಿದೆ. ಅಂದರೆ ಹುಬ್ಬಳ್ಳಿಯ ಪ್ರಮುಖ ನಾಲಾವೊಂದನ್ನು ಹಸಿರು ಕಾರಿಡಾರ್ (ಗ್ರೀನ್ ಮೊಬಿಲಿಟಿ ಕಾರಿಡಾರ್) ಆಗಿ ಪರಿವರ್ತಿಸುವ ಮೂಲಕ ಸ್ಮಾರ್ಟಸಿಟಿ ಕಂಪನಿ ಇಡೀ ದೇಶಕ್ಕೆ ಮಾದರಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.

ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್​ಸಿಟಿ ಲಿಮಿಟೆಡ್ ಕಂಪನಿಯವರು ತಯಾರಿಸಿದ ಮಾದರಿ ಯೋಜನೆ ಪ್ರಸ್ತಾವನೆಗೆ ಏಜೆನ್ಸಿ ಫಾರ್ ಫ್ರೆಂಚ್ ಡೆವಲಪ್​ವೆುಂಟ್ ಅಸೋಸಿಯೇಶನ್ಸ್ (ಎಎಫ್​ಡಿ) ಹಾಗೂ ಅಪೆಕ್ಸ್ ಕಮಿಟಿ ಬುಧವಾರ ಅನುಮೋದನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಒಂದು ಕಿಲೋ ಮೀಟರ್ ಉದ್ದದ ಪೈಲಟ್ ಪ್ರೊಜೆಕ್ಟ್​ಗೆ ಸ್ಮಾರ್ಟ್​ಸಿಟಿ ಕಂಪನಿ ಟೆಂಡರ್ ಕೂಡ ಕರೆದಿದೆ.

ಏನಿದು ಯೋಜನೆ: ಉಣಕಲ್ಲ ಕೆರೆಯಿಂದ ಆರಂಭವಾಗಿ ಗಬ್ಬೂರ ಸೇರುವ ರ್ಕ ಹಳ್ಳದ 8.5 ಕಿ.ಮೀ. ನಾಲಾ ಮೇಲ್ಗಡೆ ಸಂಪೂರ್ಣ ಹಸಿರುಮಯ ಪರಿಸರ ಹಾಗೂ ರಸ್ತೆ ನಿರ್ವಿುಸುವ ಯೋಜನೆ ಇದಾಗಿದೆ.

ಗಬ್ಬೂರ ವರೆಗಿನ ಪೂರ್ತಿ ರಸ್ತೆಗೆ ಒಟ್ಟು 130 ಕೋಟಿ ರೂ. ಗ್ರೀನ್ ಮೊಬಿಲಿಟಿ ಕಾರಿಡಾರ್ ನಿರ್ವಣಕ್ಕೆ ಯೋಜನೆ ರೂಪಿಸಲಾಗಿದೆ. ಇದೀಗ ಯೋಜನೆಗೆ ಅನುಮೋದನೆ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಮಹಾನಗರದ ಚಿತ್ರಣ ಬದಲಾಗಲಿದೆ.

ಸದ್ಯಕ್ಕೆ ಉಣಕಲ್ಲನಿಂದ ಒಂದು ಕಿ.ಮೀ.ವರೆಗಿನ ನಾಲಾಕ್ಕೆ ಪೈಲಟ್ ಪ್ರೊಜೆಕ್ಟ್​ಗೆ ಟೆಂಡರ್ ಕರೆಯಲಾಗಿದೆ. ಆರು ತಿಂಗಳಲ್ಲಿ ಪೈಲಟ್ ಪ್ರೊಜೆಕ್ಟ್ ಮುಗಿಸಲು ಕಾಲಮಿತಿ ವಿಧಿಸಲಾಗಿದೆ.

ಇಲ್ಲಿ ಏನಿರುತ್ತದೆ: ಗ್ರೀನ್ ಕಾರಿಡಾರ್​ನಲ್ಲಿ ಸೈಕಲ್ ಪಾತ್, ವಾಕಿಂಗ್ ಪಾತ್ ಇರಲಿದೆ. ಅಲ್ಲದೆ, ಅಲ್ಲಲ್ಲಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳು, ಆಟದ ಸ್ಥಳ, ಹಿರಿಯ ನಾಗರಿಕರಿಗೆ ಪಾರ್ಕ್, ಮೈದಾನ, ಪ್ರಾಣಿ ಸಂಗ್ರಹಾಲಯ, ಸುರಕ್ಷತೆ ಹಾಗೂ ಭದ್ರತೆಗೆ ಸಿಸಿ ಕ್ಯಾಮರಾ, ಒಟ್ಟಾರೆ ಜನರು ಮುಕ್ತವಾಗಿ ಸಂಚರಿಸಲು ಬೇಕಾದ ಎಲ್ಲ ಸೌಲಭ್ಯಗಳನ್ನು ಅಲ್ಲಿ ಕಲ್ಪಿಸಲಾಗುತ್ತದೆ.

ಆರೇಳು ಕಡೆಗಳಲ್ಲಿ ಸಣ್ಣ ಕೊಳಚೆ ಸಂಸ್ಕರಣಾ ಘಟಕ (ಎಸ್​ಟಿಪಿ)ಗಳು ಇರಲಿವೆ. ಉತ್ತಮ ನಗರ ಜೀವನ ಕಲ್ಪಿಸಲು ಹಾಗೂ ಆರೋಗ್ಯಕರ ವಾತಾವರಣ ನಿರ್ವಿುಸುವ ಎಲ್ಲ ಸವಲತ್ತುಗಳು ಬರಲಿವೆ.

ಸುಮಾರು 15ರಿಂದ 20 ಮೀಟರ್ ಅಗಲದ ಈ ರಸ್ತೆಯುದಕ್ಕೂ ಎಲ್ಲೆಡೆಯೂ ಹಸಿರು ವನ ನಿಮಗೆ ಕಾಣಸಿಗಲಿದೆ. ಪಾದಚಾರಿಗಳು, ಸೈಕ್ಲಿಸ್ಟ್​ಗಳಿಗೆ ಅತ್ಯುತ್ತಮ ತಾಣವಾಗಲಿದೆ. ವಿಹಾರಕ್ಕೂ ಅನುಕೂಲವಾಗಲಿದೆ.

ನಾಲಾದಲ್ಲಿನ ಮಳೆ ನೀರು ಸುಗಮವಾಗಿ ಹರಿದು ಹೋಗಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸುಮಾರು 10-15 ಅಡಿ ಎತ್ತರದಲ್ಲಿ ಕಾರಿಡಾರ್ ನಿರ್ವಿುಸುವುದರಿಂದ ಹರಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪಕ್ಕದಲ್ಲಿ ಒಳಚರಂಡಿ ಮಾರ್ಗ, ಅಲ್ಲಲ್ಲಿ ಎಸ್​ಟಿಪಿಗಳು ಇರುವುದರಿಂದ ಸ್ವಚ್ಛತೆಗೆ ಆದ್ಯತೆ ಇರಲಿದೆ.

ಹಣಕಾಸು ಎಲ್ಲಿಂದ: ಎಎಫ್​ಡಿಯಿಂದ 80 ಕೋಟಿ ರೂ. ಹಾಗೂ ಉಳಿದ 50 ಕೋಟಿ ರೂ.ಗಳನ್ನು ಸ್ಮಾರ್ಟ್​ಸಿಟಿ ಕಂಪನಿ ವಿನಿಯೋಗಿಸಲಿದೆ. ಸದ್ಯ ಒಂದು ಕಿ.ಮೀ. ರಸ್ತೆಗೆ 7 ಕೋಟಿ ರೂ.ಗೆ ಟೆಂಡರ್ ಕರೆಯಲಾಗಿದೆ.

ಸ್ಮಾರ್ಟ್​ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಮಹತ್ವದ ಯೋಜನೆ ಇದಾಗಿದೆ. ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಅನುಷ್ಠಾನ ಮಾಡುವ ಆಶಯ ಇದೆ. ಒಂದು ಕಿ.ಮೀ. ರಸ್ತೆಗೆ ಟೆಂಡರ್ ಕರೆಯಲಾಗಿದೆ.| ಎಸ್.ಎಚ್. ನರೇಗಲ್ಲ, ಹು-ಧಾ ಸ್ಮಾರ್ಟಸಿಟಿ ಲಿಮಿಟೆಡ್ ವಿಶೇಷಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net