

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಬಡಿಗೇರ ಹತ್ಯೆ ಪ್ರಕರಣ, ರಾಜ್ಯದಲ್ಲಿ ಪೆನ್‌ಡ್ರೈವ್ ಹಗರಣ… ಹೀಗೆ ಅನೇಕ ಪ್ರಕರಣಗಳು ಆತಂಕ ಉಂಟು ಮಾಡಿರುವ ಬೆನ್ನಲ್ಲೇ ಮಹಿಳೆಯರ ಸುರಕ್ಷತೆಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ‘ಓಬವ್ವ ಪಡೆ’ ಕಟ್ಟಿದ ಘಟನೆ ಮುನ್ನೆಲೆಗೆ ಬಂದಿದೆ.
ವೀರವನಿತೆ ಒನಕೆ ಓಬವ್ವ ಹೆಸರಿನ ಈ ಪಡೆಯನ್ನು ರಕ್ಷಣಾ ಇಲಾಖೆ 2018 ಜುಲೈ 25ರಂದು ಸ್ಥಾಪಿಸಿತ್ತು. ಅಂದಿನ ಎಸ್‌ಪಿ ಶ್ರೀನಾಥ್ ಜೋಶಿ ಅವರ ಅವಧಿಯಲ್ಲಿ, ದಾವಣಗೆರೆ ಪೂರ್ವ ವಲಯದ ಐಜಿ ಕೆ.ವಿ.ಶರತ್‌ಚಂದ್ರ ಚಾಲನೆ ನೀಡಿದ್ದರು. ಆರಂಭದ ಕೆಲ ವರ್ಷಗಳ ಕಾಲ ಸಕ್ರಿಯವಾಗಿದ್ದ ಈ ತಂಡ ಈಗ ನಿಷ್ಕ್ರಿಯವಾಗಿದೆ. ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಡೆಗೆ ಮರುಜೀವ ದೊರೆಯಬಹುದೇ ಎಂಬ ಕಾತರದಲ್ಲಿ ಮಹಿಳೆಯರಿದ್ದಾರೆ.
*ಉದ್ದೇಶವೇನು?: ಓಬವ್ವ ಪಡೆ ಸ್ಥಾಪನೆ ಹಿಂದಿದ್ದ ಗುರಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆ. ಮಹಿಳಾ ಪೊಲೀಸರಿದ್ದ ತಂಡ ಆರಂಭದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಗಸ್ತು ತಿರುಗುತ್ತಿತ್ತು. ಶಾಲಾ, ಕಾಲೇಜು, ಹಾಸ್ಟೆಲ್‌ಗಳು, ಮಹಿಳಾ ಪಿಜಿಗಳಿಗೆ ತೆರಳಿ ಕರಾಟೆ ಮತ್ತಿತರ ಸ್ವಯಂರಕ್ಷಣೆ ಕಲೆಗಳ ಕೌಶಲ ಕುರಿತಂತೆ ಪ್ರಾತ್ಯಕ್ಷಿಕೆ ನೀಡುತ್ತಿತ್ತು.
ಮಕ್ಕಳ ಹಕ್ಕು, ಮೊಬೈಲ್, ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ, ಹಿಂಬಾಲಿಸುವ, ಅನಗತ್ಯವಾಗಿ ಮಾತನಾಡಿಸಲು ಪ್ರಯತ್ನಿಸುವಂಥವರ ಹಾಗೂ ಶಿಕ್ಷಣ ಸಂಸ್ಥೆಗಳ ಬಳಿ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ವಿರುದ್ಧ ಕೂಡಲೇ ಪ್ರಾಚಾರ‌್ಯರು ಮತ್ತು ಪೊಲೀಸರಿಗೆ ಮಾಹಿತಿ ನೀಡುವಂತೆ ಅರಿವು ಮೂಡಿಸುತ್ತಿತ್ತು.
ಬಾಲ್ಯವಿವಾಹ, ಸೈಬರ್ ಅಪರಾಧಗಳು, ಸಂಚಾರ ನಿಯಮಗಳ ಪಾಲನೆ, ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಜಾಗೃತಿ ಮೂಡಿಸುವ ಜತೆಗೆ ಶಾಲಾ-ಕಾಲೇಜುಗಳ ಬಳಿ ತಂಬಾಕು ಮಾರಾಟದ ವಿರುದ್ಧವೂ ಕ್ರಮ ಜರುಗಿಸುತ್ತಿತ್ತು.
ಇದಕ್ಕಾಗಿ ಚಳ್ಳಕೆರೆ ಪೊಲೀಸ್ ಉಪವಿಭಾಗದಿಂದ 12, ಚಿತ್ರದುರ್ಗ -16 ಹಾಗೂ ಹಿರಿಯೂರು ಪೊಲೀಸ್ ಉಪವಿಭಾಗದಿಂದ 16 ಆಯ್ದ ಮಹಿಳಾ ಅಧಿಕಾರಿ, ಸಿಬ್ಬಂದಿಯ ತಂಡಕ್ಕೆ ಚಿತ್ರದುರ್ಗದ ಡಿಎಆರ್‌ನಲ್ಲಿ 21 ದಿನಗಳ ಕಾಲ ತರಬೇತಿಯನ್ನು ಕೊಡಲಾಗಿತ್ತು.
*ಅಪರಾಧ ಕೃತ್ಯಗಳು ಹತೋಟಿಗೆ: ಇಷ್ಟೇ ಅಲ್ಲದೆ ತಂಡ ಬಸ್‌ಸ್ಟಾೃಂಡ್, ರೈಲು ನಿಲ್ದಾಣ, ಬಸ್, ರೈಲುಗಳು, ಕೋಟೆ ಮತ್ತಿತರ ಐತಿಹಾಸಿಕ ಸ್ಥಳಗಳು, ಆಡುಮಲ್ಲೇಶ್ವರ ಮೃಗಾಲಯ, ಜೋಗಿಮಟ್ಟಿ, ಜನದಟ್ಟಣೆ ಪ್ರದೇಶಗಳು, ಮುರುಘಾವನ, ಚಂದ್ರವಳ್ಳಿ ಮತ್ತಿತರ ಕಡೆ ಹದ್ದಿನ ಕಣ್ಣಿಟ್ಟಿತ್ತು. ಪುಂಡ-ಪೋಕರಿಗಳ ಮೇಲೆ ಹಲವು ಪ್ರಕರಣಗಳನ್ನು ಕೂಡ ದಾಖಲಿಸಿತ್ತು.
ಇದರಿಂದ ಚುಡಾಯಿಸುವಿಕೆ, ಶಾಲಾ-ಕಾಲೇಜು, ಹಾಸ್ಟೆಲ್‌ಗಳ ಬಳಿಕ ಅನುಮಾನಾಸ್ಪದ ವ್ಯಕ್ತಿಗಳ ಓಡಾಟಕ್ಕೆ ಕಡಿವಾಣ ಬಿದ್ದಿತ್ತು. ಸರಗಳ್ಳತನದಂಥ ಕೃತ್ಯಗಳು ಒಂದಷ್ಟು ಹತೋಟಿಗೆ ಬಂದಿದ್ದವು.
ಮಹಿಳಾ ರಕ್ಷಣೆಯ ಸದುದ್ದೇಶದಿಂದ ಅಸ್ತಿತ್ವಕ್ಕೆ ಬಂದ ಪಡೆಗೆ ಇಲಾಖೆ ಮರು ಜೀವ ನೀಡುವುದೇ ಕಾದು ನೋಡಬೇಕಾಗಿದೆ.
*ಕೋಟ್
ಓಬವ್ವ ಪಡೆ ಕಾರ‌್ಯನಿರ್ವಹಣೆ ಕುರಿತಂತೆ ಅಧ್ಯಯನ ನಡೆಸಿ, ಜಿಲ್ಲೆಯಲ್ಲಿ ಈ ಪಡೆಯ ಕಾರ‌್ಯಾಚರಣೆಯನ್ನು ಮರು ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು.
ಧರ್ಮೇಂದರ್‌ಕುಮಾರ್ ಮೀನಾ, ಎಸ್‌ಪಿ, ಚಿತ್ರದುರ್ಗ