

ಹಾಸನ: ನಾರಿ ಶಕ್ತಿಗೆ ಅಧಿಕಾರ ಕೊಟ್ಟರೆ ಎಂತಹ ಕೆಲಸವಾದರೂ ಕೂಡ ಚಾಚೂ ತಪ್ಪದೇ ಮಾಡುತ್ತಾರೆಂಬುದಕ್ಕೆ ಹಾಸನಾಂಬೆ ಉತ್ಸವವೇ ಸಾಕ್ಷಿ ಎಂದು ಶ್ರವಣಬೆಳಗೊಳ ಮಠದ ಮಠಾಧೀಶ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಭಟ್ಟಾಚಾರ್ಯವರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರ ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪೀಠಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಹಾಸನಾಂಬೆ ದರ್ಶನ ಪಡೆದಿದ್ದೇನೆ. ಈ ಹಿಂದಿಗಿಂತಲೂ ವೈಭವದಿಂದ ಯಾವುದೇ ಸಣ್ಣ ಲೋಪವಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದರು.
ಮನೆಯಲ್ಲಿ ಯಾವುದೇ ಒಂದು ಕಾರ್ಯಕ್ರಮ ನಡೆದರೂ ಅದರಲ್ಲಿ ಪುರುಷರಿಗಿಂತ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾದದ್ದು, ಅದೇ ರೀತಿ ಹಾಸನಾಂಬೆ ಉತ್ಸವವನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ತಹಸೀಲ್ದಾರ್ ಸೇರಿದಂತೆ ಹಲವು ಮಹಿಳಾ ಅಧಿಕಾರಿಗಳು ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ತಂಡಕ್ಕೆ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಕಾರ್ಯಕ್ರಮದ ಜವಾಬ್ದಾರಿಯನ್ನ ನೀಡಿದರೆ ಅವರು ಇಡೀ ದೇಶ ಅಲ್ಲದೆ, ಪ್ರಪಂಚವೇ ತಿರುಗಿ ನೋಡುವಂತೆ ಕಾರ್ಯಕ್ರಮವನ್ನು ಅವರು ಅಷ್ಟೇ ಅಚ್ಚುಕಟ್ಟಾಗಿ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಹಾಸನಾಂಬೆ ನಾಡು ಸಮೃದ್ಧಿ ಆಗಲಿ ರಕ್ಷಣೆ ಆಗಲಿ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.