ನಾರಾಯಣಪುರ ಘಟನೆ ಸಿಐಡಿ ತನಿಖೆಗೆ ಕೋಲಿ ಸಮಾಜ ನಾಯಕರ ಸ್ವಾಗತ; ಸತ್ಯಾಂಶ ಬಯಲಿಗೆ ಬರಲಿದೆ

IMG-20230722-WA0001
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಕಳೆದ ತಿಂಗಳು ಜರುಗಿದ ಹೆಡ್ ಕಾನ್‌ಸ್ಟೇಬಲ್ ಮಯೂರ ಚವ್ಹಾಣ ಸಾವಿನ ಹಾಗೂ ಸಿದ್ಧಪ್ಪ ಕರಜಗಿ ಬಂಧನ ಪ್ರಕರಣ ಕುರಿತು ಸಿಐಡಿ ತನಿಖೆಗೆ ಸರ್ಕಾರ ವಹಿಸಿಕೊಟ್ಟಿರುವುದನ್ನು ಕೋಲಿ ಸಮಾಜದ ಮುಖಂಡರು ಸ್ವಾಗತಿಸಿದ್ದಾರೆ. ಅಲ್ಲದೆ ತನಿಖೆಯಲ್ಲಿ ಸತ್ಯಾಂಶ ಬಯಲಿಗೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕೋಲಿ ಕಬ್ಬಲಿಗ ಸಮಾಜದ ಮುಖಂಡರಾದ ಶೋಭಾ ಬಾಣಿ, ಅವ್ವಣ್ಣ ಮ್ಯಾಕೇರಿ ಹಾಗೂ ಶರಣಪ್ಪ ತಳವಾರ  ಅವರು ನಗರದಲ್ಲಿ ಭಾನುವಾರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾರಾಯಣಪುರ ಘಟನೆ ಕುರಿತು ಸಿಐಡಿ ತನಿಖೆಯನ್ನು ನಿಜವಾಗಿರುವ ಅಂಶ ಬೆಳಕಿಗೆ ಬರದೆ ಹೋದರಲ್ಲಿ  ಮತ್ತೇ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ. ಅಧಿವೇಶನದಲ್ಲಿ ಈ ಕುರಿತು ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯರಾದ ಶಶೀಲï ನಮೋಶಿ, ಎನ್.ರವಿಕುಮಾರ, ಸಾಯಬಣ್ಣ ತಳವಾರ, ತಿಪ್ಪಣ್ಣಪ್ಪ ಕಮಕನೂರ, ವೈ. ನಾರಾಯಣಸ್ವಾಮಿ ಅವರಿಗೆ ಹಾಗೂ ಸಿಐಡಿ ತನಿಖೆಗೆ ವಹಿಸಿಕೊಡುವುದಾಗಿ ಘೋಷಣೆ ಮಾಡಿದ  ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ  ಕೃತಜ್ಞತೆ ಸಲ್ಲಿಸುವುದಾಗಿ ಜಿಪಂ ಮಾಜಿ ಸದಸ್ಯ ಶೋಭಾ ಬಾಣಿ ಹೇಳಿದರು.
ಆಳಂದ ತಾಲ್ಲೂಕಿನ ಹಳ್ಳಿಯೊಂದರಲ್ಲಿ ೧೨ ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆಯನ್ನು ಖಂಡಿಸಿದರು. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಕೂಡಲೇ  ಕೊಲೆಗಾರರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಕೋಲಿ ಸಮಾಜದ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಎಸ್‌ಪಿ ಅವರು ಹಿಂಬಡ್ತಿ  ಮಾಡುವುದು, ಇಲ್ಲವೇ ತೊಂದರೆ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನು ಸಮಾಜ ಸಹಿಸುವುದಿಲ್ಲ ಎಂದು ಅವಣ್ಣ ಮ್ಯಾಕೇರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಭೀಮರಾಯ ಜನಿವಾರ, ಮಲ್ಲಿಕಾರ್ಜುನ ಎಮ್ಮೆನೂರ, ಜೆಟ್ಟೆಪ್ಪ ದೋಣಿ, ದತ್ತು ಇಟಗಾ, ಶಿವಪುತ್ರಪ್ಪ ಕೋಣಿನ್, ಭೂತಾಳಿ ವಕೀಲ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net