

ಹಾಸನ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಗುರುವಾರ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಹೆದ್ದಾರಿ 75ರನ್ನು ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಸಿ.ಡಿ ಮನುಕುಮರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ಕರವೇ ಕಾರ್ಯಕರ್ತರು ನಗರದ ಭುವನಹಳ್ಳಿ ಬೆಂಗಳೂರು ರಸ್ತೆ ಬೈ ಪಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 75ನ್ನು ತಡೆದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು, ನಂತರ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಿ.ಡಿ. ಮನುಕುಮಾರ್ ಅವರು, ಕಳೆದ ಒಂದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡ ನೇತೃತ್ವದ ನಡೆದಂತಹ ಕನ್ನಡ ಅಭಿಯಾನ ಜಾಥ ಅನ್ಯ ಭಾಷೆಯ ನಾಮ ಫಲಕವನ್ನು ತೆಗೆಸಿ ಕನ್ನಡ ನಾಮಫಲಕ ಹಾಕಬೇಕೆನ್ನುವ ಉದ್ದೇಶದಲ್ಲಿ ಹೊರಟಾಗ ರಾಜ್ಯಸರ್ಕಾರದ ಕುಮ್ಮಕ್ಕುನಿಂದ ಪೊಲೀಸರು ಬಂಧನ ಮಾಡಿದ್ದಾರೆ. ಕನ್ನಡ ಪರ ಹೋರಾಟಗಾರರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎನ್ನುವ ಸೌಜನ್ಯ ಕೂಡ ರಾಜ್ಯ ಸರಕಾರಕ್ಕೆ ಇಲ್ಲ ಆಕ್ರೋಶ ವ್ಯಕ್ತಡಿಸಿದರು.ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಕನ್ನಡ ಅಭಿಯಾನ ಶುರುಮಾಡುವ ವೇಳೆ ಕರವೇ ರಾಜ್ಯಾಧ್ಯಕ್ಷರನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ. ನಮ್ಮ ಕನ್ನಡ ಭಾಷಿಕರೇ ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಬಂದಿದೆ. ಬೇರೆ ರಾಜ್ಯದಿಂದ ವಲಸೆ ಬಂದಿರುವ ಇತರೆ ಭಾಷಿಕರು ಬಂದು ಅವರಿಂದ ಕನ್ನಡಿಗರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇದೆ ರೀತಿ ಮುಂದುವರೆದರೇ ಕರ್ನಾಟಕವೇ ನಮ್ಮದು ಎಂದು ಕೇಂದ್ರಾಡಳಿತ ಪ್ರದೇಶ ಮಾಡಲು ಹೇಳಿಕೆ ಕೊಡಲು ಯಾರು ಹಿಂಜರಿಯುವುದಿಲ್ಲ. ಇಂತಹ ವೇಳೆ ನಾವು ಹೋರಾಟ ಕೈಗೆತ್ತಿಕೊಂಡಾಗ ಬಂದಿಸಿರುವುದು ಖಂಡನಿಯ ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಸೀತರಾಮು, ಕಾರ್ಮಿಕ ಘಟಕದ ಬೋರೇಗೌಡ, ಅಭಿಗೌಡ, ಯುವ ಘಟಕದ ಅಧ್ಯಕ್ಷ ಪ್ರೀತಮ್ ರಾಜ್, ಬೇಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್, ಆಲೂರು ತಾಲೂಕು ಅಧ್ಯಕ್ಷ ನಟರಾಜ್, ತನುಗೌಡ ಇತರರು ಇದ್ದರು.