ನಾರಾಯಣಗೌಡರ ಕರೆತಂದರೆ ಠೇವಣಿ ಸಿಗದಂತೆ ಮಾಡ್ತೇವೆ

13 krp - 01
Published on

ಕೆ.ಆರ್.ಪೇಟೆ: ಪ್ರತಿ ಚುನಾವಣೆಯಲ್ಲೂ ಪಕ್ಷ ಬದಲಿಸುವ ಸಚಿವ ಕೆ.ಸಿ.ನಾರಾಯಣಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದರೆ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಠೇವಣಿ ಸಿಗದಂತೆ ಮಾಡುತ್ತೇವೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಗುಡುಗಿದರು.


ಪಟ್ಟಣದ ಕೆ.ಬಿ.ವಿವೇಕ್ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಪಕ್ಷದ ಮೂಲಕವೇ ರಾಜಕಾರಣ ಪ್ರವೇಶಿಸಿದವರು. ನಂತರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ ಟಿಕೆಟ್ ತಂದು ಅಭ್ಯರ್ಥಿಯಾಗಿ ಠೇವಣಿ ಕಳೆದುಕೊಂಡರು. ಸ್ಥಳೀಯ ನಾಯಕರ ಮೂಲಕ ಜೆಡಿಎಸ್ ಟಿಕೆಟ್ ಪಡೆದು ಕ್ಷೇತ್ರದ ಶಾಸಕರಾದರು. ನಂತರ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕ್ಷೇತ್ರದ ಮತದಾರರಿಗೆ ದ್ರೋಹ ಬಗೆದು ಬಿಜೆಪಿ ಸೇರಿದರು.


ಇದೀಗ ಸಚಿವ ಸ್ಥಾನ ನೀಡಿದ ಬಿಜೆಪಿಗೂ ದ್ರೋಹ ಬಗೆದು ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ನನ್ನ ಗುರಿ ಒಂದೇ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಲಿ. ನಾವು ಆರು ಜನ ಟಿಕೆಟ್ ಆಕಾಂಕ್ಷಿಗಳು ಒಗ್ಗೂಡಿ ಕೆಲಸ ಮಾಡುತ್ತೇವೆ. ಆದನ್ನು ಬಿಟ್ಟು ನಾರಾಯಣಗೌಡರಿಗೆ ಪಕ್ಷದ ಬಾಗಿಲು ತೆರೆಯಬಾರದು ಎಂದು ಪಕ್ಷದ ವರಿಷ್ಠರಿಗೆ ಖಡಕ್ ಸೂಚನೆ ನೀಡಿದರು.


ಶಾಸಕರಾಗಿದ್ದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ ಕೆ.ಬಿ.ಚಂದ್ರಶೇಖರ್, ಸಚಿವ ಕೆ.ಸಿ.ನಾರಾಯಣಗೌಡ ತಮಗೆ ಸಿಕ್ಕ ಸಚಿವ ಸ್ಥಾನದ ಶಕ್ತಿಯನ್ನು ಬಳಕೆ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ. ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರಕ್ಕೆ ಮುಕ್ತಗೊಳಿಸುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಕಾಂಗ್ರೆಸ್ಸಿಗರೇ ಕಾರಣ. ವಿರೋಧಿಗಳು ಒಡ್ಡುವ ಹಣದ ಆಸೆಗೆ ನಮ್ಮ ಕಾರ್ಯಕರ್ತರು ಬಲಿಯಾಗಬಾರದು. ಕಾರ್ಯಕರ್ತರು ಸ್ವಾಭಿಮಾನದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.


ಕಾರ್ಯಕರ್ತರ ಎಚ್ಚರಿಕೆ: ಸಚಿವ ಕೆ.ಸಿ.ನಾರಾಯಣಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರು ಒಂದು ವೇಳೆ ಕೆಸಿಎನ್ ಕಾಂಗ್ರೆಸ್ ಟಿಕೆಟ್ ತಂದರೆ ಕ್ಷೇತ್ರದ ಆರು ಜನ ಟಿಕೆಟ್ ಆಕಾಂಕ್ಷಿಗಳ ಮನೆ ಬಾಗಿಲಿಗೆ ಸೀರೆ, ಬಳೆ ಮತ್ತು ಕುಪ್ಪಸ ಕಳುಹಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ವಿಜಯ ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರ ಕುಮಾರ್, ಚಿನಕುರಳಿ ರಮೇಶ್, ಸಿ.ಎಂ.ದ್ಯಾವಪ್ಪ, ಅಂಜನಾ ಶ್ರೀಕಾಂತ್, ವೀಣಾ ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net