ನಾರಾಯಣ ಗುರುಗಳ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಿ

Published on

ಚಾಮರಾಜನಗರ: ಪ್ರಸ್ತುತ ಕಾಲಘಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆಗಳು ಅಗತ್ಯವಿದ್ದು, ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಕರೆ ನೀಡಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ವ್ಯವಸ್ಥೆಯಲ್ಲಿ ನಾರಾಯಣಗುರುಗಳ ತತ್ವ ಸಿದ್ಧಾಂತ ಬಹಳ ಮುಖ್ಯವಾಗುತ್ತದೆ. ಅವರು ಹೇಳಿದ ಒಂದೇ ಜಾತಿ, ಒಂದೇ ಮತ ಚಿಂತನೆಯನ್ನು ನಾವೆಲ್ಲರೂ ಅಳವಡಿಸಿಕೊಂಡು ಸಾಗಬೇಕಿದೆ. ಅವರ ಆಶ್ರಮಕ್ಕೆ ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಇನ್ನಿತರೆ ಮಹಾನ್ ವ್ಯಕ್ತಿಗಳು ಭೇಟಿ ನೀಡಿದ್ದರು. ಕೇರಳಾ ಪ್ರಸ್ತುತ ಸಾಕ್ಷರತಾ ಪ್ರಮಾಣದಲ್ಲಿ ಶೇ.90 ರಷ್ಟು ಸಾಧನೆ ಮಾಡಿದೇ ಎಂಬುದಕ್ಕೆ ನಾರಾಯಣಗುರುಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಣೆ ಮಾಡಲು ಸಿದ್ದರಾಮಯ್ಯ ಅವರು ಕಾರಣರಾಗಿದ್ದಾರೆ. ಈ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ರಾಜ್ಯ ಸರ್ಕಾರದಿಂದಲೇ ಆಚರಣೆ ಮಾಡಬೇಕು, ಪಠ್ಯಪುಸ್ತಕದಲ್ಲಿ ನಾರಾಯಣಗುರುಗಳ ಕುರಿತು ಪಠ್ಯವನ್ನು ಸೇರಿಸಬೇಕು ಹಾಗೂ ನಾರಾಯಣಗುರು ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದ್ದೆ. ಅದರಂತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಾರಾಯಣಗುರುಗಳ ಜಯಂತಿಯನ್ನು ಪ್ರಾರಂಭಿಸಿತು ಎಂದು ತಿಳಿಸಿದರು.

ರಾಜ್ಯದಲ್ಲಿ ಹೆಂಡವನ್ನು ನಿಷೇಧ ಮಾಡಿದ್ದರಿಂದ ನಮ್ಮ ಸಮಾಜ ಬೀದಿಗೆ ಬಂತು. ಆಗಾಗಿ ಅವರ ಏಳಿಗೆಗೆ ಶ್ರಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಈ ಸಮುದಾಯದ ಡಾ.ರಾಜ್ ಕುಮಾರ್, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಪುನೀತ್ ರಾಜ್‌ಕುಮಾರ್ ಇನ್ನಿತರರು ಅಪಾರವಾದ ಕೊಡುಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಕೆಲಸವನ್ನು ಮಾಡಬೇಕು. ಸಮುದಾಯ ಮತ್ತಷ್ಟು ಸಂಘಟಿತರಾಗಬೇಕು. ಜಿಲ್ಲಾ ಕೇಂದ್ರದಲ್ಲಿ ನಾರಾಯಣಗುರು ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳೀಯ ಶಾಸಕರು ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ನಿಟ್ಟೂರು ಶ್ರೀನಾರಾಯಣಗುರು ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀರೇಣುಕಾನಂದ ಸ್ವಾಮೀಜಿ, ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ, ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್, ಎಸ್ಪಿ ಡಾ.ಬಿ.ಟಿ.ಕವಿತಾ, ಸಮುದಾಯದ ಮುಖಂಡ ಚಿನ್ನೇಗೌಡ, ಪೋತರಾಜ್ ಹಾಗೂ ಇತರರು ಹಾಜರಿದ್ದರು.

ಸಮಾಜ ಸುಧಾರಣೆಯ ಹರಿಕಾರ:

ದೇಶಕಂಡ ಮಹಾನ್ ಸಮಾಜ ಸುಧಾರಕರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಮೊದಲಿಗರಾಗಿದ್ದಾರೆ ಎಂದು ಸಾಹಿತಿ ಬಿಸಲವಾಡಿ ಸೋಮಶೇಖರ್ ಹೇಳಿದರು. ಜಗತ್ತಿನ ಹಲವಾರು ಜ್ಞಾನಿಗಳು ನಾರಾಯಣಗುರುಗಳ ದೂರದೃಷ್ಟಿಯ ಚಿಂತನೆಯನ್ನು ಅನುಸರಿಸಿದ್ದಾರೆ. ಅವರ ತತ್ವ-ಸಿದ್ಧಾಂತಗಳು ಹಿಂದೂ ಧರ್ಮದ ಅನಾಚಾರ ಮತ್ತು ಮೌಢ್ಯಗಳಿಗೆ ಬಹುದೊಡ್ಡ ಛಾಟಿ ಏಟನ್ನು ನೀಡಿದೆ. ದೇವಸ್ಥಾನಗಳಿಗೆ ಶೂದ್ರ ಅರ್ಚಕರನ್ನು ನೇಮಕ ಮಾಡುವ ಮೂಲಕ, ಅಲ್ಲಿ ಸಮಾನತೆ ತಂದರೇ ಎಲ್ಲಾ ಕಡೆಯೂ ಸಮಾನತೆಯನ್ನು ತರಬಹುದಾಗಿದೆ ಎಂಬ ಆಶಯವನ್ನು ಇಟ್ಟುಕೊಂಡಿದ್ದರು. ಸಮಾಜದ ಪಿಡುಗುಗಳಾದ ಬಾಲ್ಯವಿವಾಹ, ಜಾತಿ ಪದ್ಧತಿ, ಸಮಾಜದ ಮೌಢ್ಯದ ವಿರುದ್ಧ ಹೋರಾಟವನ್ನು ರೂಪಿಸಿದರು. ದೇವಸ್ಥಾನದ ಗೋಡೆಗಳಲ್ಲಿ ಸತ್ಯ ಶಾಂತಿ ನೆಲೆಸಲಿ ಎಂಬ ಭಾವನೆಯನ್ನು ಹೊಂದಿದ್ದ ನಾರಾಯಣ ಗುರುಗಳು, ಅದಕ್ಕಿಂತಲೂ ಹೆಚ್ಚಾಗಿ ಗ್ರಂಥಾಲಯ ಮತ್ತು ಶಾಲೆಗಳನ್ನು ತೆರೆಯಲು ಕರೆನೀಡಿದರು. ಪ್ರಸ್ತುತ ಸಂದರ್ಭದಲ್ಲಿ ನಾರಾಯಣ ಗುರುಗಳ ಚಿಂತನೆಗಳು ಅಗತ್ಯವಾಗಿದೆ ಎಂದು ತಿಳಿಸಿದರು.

ಭಾವಚಿತ್ರ ಮೆರವಣಿಗೆ:

ನಗರದ ಪ್ರವಾಸಿ ಮಂದಿರದಲ್ಲಿ ಶ್ರೀನಾರಾಯಣಗುರು ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಹೊರಟ ಮೆರವಣಿಗೆ ಸುಲ್ತಾನ್ ಷರೀಪ್ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ರಥದ ಬೀದಿ, ಶ್ರೀಭವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿ ವೇದಿಕೆ ಕಾರ್ಯಕ್ರಮ ನಡೆದ ಜಿಲ್ಲಾ ರಂಗಮಂದಿರದಲ್ಲಿ ಅಂತ್ಯವಾಯಿತು. ವೀರಗಾಸೆ, ಗಾರುಡಿ ಗೊಂಬೆ ಕುಣಿತ ಹಾಗೂ ಇನ್ನಿತರೆ ಕಲಾತಂಡಗಳು ಮೆರವಣಿಗೆಗ ಮತ್ತಷ್ಟು ಮೆರುಗ ನೀಡಿತು. ಸಮುದಾಯದ ಯುವಕರು ಮೆರವಣಿಗೆಯುದ್ಕಕೂ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.

ಸಚಿವರಿಗೆ ಸೇಬಿನ ಹಾರ:

ನಗರದ ಶ್ರೀಭವನೇಶ್ವರಿ ವೃತ್ತದ ಬಳಿ ಭಾವಚಿತ್ರ ಮೆರವಣಿಗೆ ಬಂದಾಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೆರವಣಿಗೆಯನ್ನು ಕೂಡಿಕೊಂಡರು. ಈ ವೇಳೆ ಸಮಾಜದ ವತಿಯಿಂದ ಮಧುಬಂಗಾರಪ್ಪ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಹಾಗೂ ಪಟಾಕಿಯನ್ನು ಸಿಡಿಸುವ ಮೂಲಕ ಸಮುದಾಯದ ಯುವಕರು ಸಂಭ್ರಮ ವ್ಯಕ್ತಪಡಿಸಿದರು. ಸಮಾಜದ ಶ್ರೀಗಳು, ಸಚಿವ ಮಧು ಬಂಗಾರಪ್ಪ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಜಿಲ್ಲಾಡಳಿತ ಭವನದ ಮುಖ್ಯದ್ವಾರದ ವರೆಗೂ ಮೆರವಣಿಗೆಯಲ್ಲಿ ಸಾಗಿ ಬಂದರು.

ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತುಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರುಗಳು ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ಜಾತಿ ಆಧಾರಿತ ತಾರತಮ್ಯವನ್ನು ಮೀರಿದ ಶ್ರೇಷ್ಠ ಆದರ್ಶವನ್ನು ಅಳವಡಿಸಿಕೊಂಡಿದ್ದ ಅವರು ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.

-ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net