

ಸೋಮವಾರಪೇಟೆ: ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಟದ ಮೂಲಕ ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡಲು ಶ್ರಮಿಸಿದ ಶ್ರೀ ನಾರಾಯಣ ಗುರುಗಳ ತತ್ವಾದರ್ಶ, ಚಿಂತನೆಗಳು ಎಂದಿಗೂ ಸಾರ್ವಕಾಲಿಕ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಪಟ್ಟಣದ ಹಿಂದು ಮಲಯಾಳ ಸಮಾಜದ ವತಿಯಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಓಣಂ ಉತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ರಾಜ್ಯದ ನಾಲ್ಕು ಕಡೆಗಳಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ತಲಾ 25 ಕೋಟಿ ವೆಚ್ಚದಲ್ಲಿ 4 ಶಾಲೆಗಳ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಸೋಮವಾರಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಿಂದು ಮಲಯಾಳ ಸಮಾಜ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿದ್ದ ಸೋಲೂರು ಆರ್ಯ ಈಡಿಗ ಮಠದ ಪೀಠಾಧ್ಯಕ್ಷರಾದ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಕೇರಳ ಜಿಲ್ಲೆಯ ಕಾಂಞಂಗಾಡ್ ಗೃಹಸ್ಥಾಶ್ರಮದ ಗಂಗಾಜೀ ನಾಯರ್ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದು ಮಲಯಾಳ ಸಮಾಜದ ಅಧ್ಯಕ್ಷರಾದ ವಿ.ಎಂ.ವಿಜಯ ಮಾತನಾಡಿ, ಯಾವುದೇ ಸಮಾಜ ಅಭಿವೃದ್ದಿ ಹೊಂದಬೇಕಾದರೆ ನಾವು ಶೈಕ್ಷಣಿಕವಾಗಿ ಮುಂದೆ ಬರಬೇಕು. ಮಲಯಾಳ ಸಮಾಜದ ಯಾವುದೇ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡರೆ ಸಹಾಯ ಮಾಡಲಾಗುವುದು ಎಂದರು.
ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಬಿ.ಎ.ಜೀವಿಜಯ, ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಕಾಂಗ್ರೆಸ್ ಮುಖಂಡ ಡಾ.ಮಂಥರ್‌ಗೌಡ. ಓಣಂ ಉತ್ಸವ ಸಮಿತಿ ಅಧ್ಯಕ್ಷ ಪಿ.ಡಿ.ಪ್ರಕಾಶ್, ಜೆಡಿಎಸ್ ಮುಖಂಡ ಎಚ್.ಆರ್.ಸುರೇಶ್, ಬಿಜೆಪಿ ಮುಖಂಡ ಭರತ್ ಕುಮಾರ್, ಹಿಂದು ಮಲೆಯಾಳಿ ಸಂಘದ ಪ್ರಮುಖರು ಇದ್ದರು.
ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಪುಟ್ಟರಾಜು, ಕೃಷಿ ವಿಜ್ಞಾನಿ ಎ.ಡಿ.ಮೋಹನ್ ಕುಮಾರ್, ಶಿಲ್ಪ ಕಲಾವಿದ ಅನೀಶ್, ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ವೈಶಾಖ್, ಯಕ್ಷಿತ್, ಸ್ನೇಹಾ, ಜೀವನ್ ಅವರನ್ನು ಸನ್ಮಾನಿಸಲಾಯಿತು. ಹತ್ತನೇ ತರಗತಿ, ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಿಂಗಾರಿ ಮೇಳದೊಂದಿಗೆ ಮೆರವಣಿಗೆ ನಡೆಯಿತು.