ನಾರಂಜಾ ಕಾರ್ಖಾನೆ ಕ್ರಷಿಂಗ್ ಶುರು

DSC_0018
Published on

ಬೀದರ್: ತಾಲೂಕಿನ ಜನವಾಡ ಹತ್ತಿರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್ನೆಸ್ಸೆಸ್ಕೆ) ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆಗೆ ಮಂಗಳವಾರ ಚಾಲನೆ ನೀಡಲಾಯಿತು.

ಜಿಲ್ಲೆಯ ಪೂಜ್ಯರ ಸಾನ್ನಿಧ್ಯದಲ್ಲಿ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಪೂಜೆ ನೆರವೇರಿಸಿ ಯಂತ್ರಕ್ಕೆ ಕಬ್ಬು ಹಾಕುವ ಮುಖಾಂತರ ಕ್ರಷಿಂಗ್ ಗೆ ಚಾಲನೆ ನೀಡಿ ಮಾತನಾಡಿ, ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಸ್ಥಾಪಿಸಿದ ಈ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಪ್ರಸಕ್ತ ಕಾರ್ಖಾನೆ ಸರಿಯಾಗಿ ನಡೆಸಿ ರೈತರಿಗೆ ಉತ್ತಮ ಬೆಲೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಕಾರ್ಖಾನೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶವಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರ ಸಹಕಾರ, ಮಾರ್ಗದರ್ಶನದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಖಾನೆ ಪುನಶ್ಚೇತನವನ್ನು ಕೈಗೊಳ್ಳಲಾಗುತ್ತದೆ. ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ರೈತರಿಗೆ ನಿಗದಿತ ಅವಧಿಯೊಳಗೆ ಹಣ ಪಾವತಿಸಲಾಗುವುದು. ರೈತರು ತಮ್ಮ ಕಬ್ಬನ್ನು ಬೇರೆಡೆ ಪಲ್ಲಟ ಮಾಡದೆ ಕಾರ್ಖಾನೆಗೆ ಸಾಗಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠದ ಶ್ರೀ ಗುರುಬಸವ ಪಟ್ಟದ್ದೇವರು, ಭಾತಂಬ್ರಾದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ, ಹುಲಸೂರಿನ ಶ್ರೀ ಡಾ. ಶಿವಾನಂದ ಸ್ವಾಮೀಜಿ, ಮೇಹಕರ್-ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ, ಸಾಯಗಾಂವ ಶ್ರೀ, ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕಾರ್ಖಾನೆ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ, ಉಪಾಧ್ಯಕ್ಷ ಬಾಲಾಜಿ ಚವ್ಹಾಣ್, ಎಂಡಿ ಬಿ.ಎಸ್.ಅಪರಂಜಿ ಸೇರಿದಂತೆ ಎಲ್ಲ ನಿರ್ದೇಶಕರು, ವಿವಿಧ ವಿಭಾಗ ಮುಖ್ಯಸ್ಥರು ಇದ್ದರು.

ಅತಿವೃಷ್ಟಿಯಿಂದಾಗಿ ಈ ಸಲ ಜಿಲ್ಲೆಯಲ್ಲಿ ಕಬ್ಬು ಬೆಳೆ ವ್ಯಾಪಕವಾಗಿ ಹಾನಿಗೀಡಾಗಿದೆ. ಹೀಗಾಗಿ ಕಾರ್ಖಾನೆಗಳಿಗೆ ನಿರೀಕ್ಷಿತ ಕಬ್ಬು ಬರುವುದು ಅನುಮಾನ. ಈ ಸ್ಥಿತಿಯಲ್ಲಿ ಜಿಲ್ಲೆ ರೈತರು ತಮ್ಮ ಕಬ್ಬನ್ನು ಯಾವುದೇ ಕಾರಣಕ್ಕೆ ಬೇರೆ ಜಿಲ್ಲೆ, ಹೊರರಾಜ್ಯಕ್ಕೆ ಕಳಿಸದೆ ಇಲ್ಲಿನ ಕಾರ್ಖಾನೆಗೇ ಹಾಕಿ ಸಹಕರಿಸಬೇಕು. ರೈತರಿಗೆ ಸೂಕ್ತ ಬೆಲೆ ನೀಡಲಾಗುತ್ತದೆ.-ಡಿ.ಕೆ.ಸಿದ್ರಾಮ, ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net