ನಾಯಿಗಳ ದಾಳಿಗೆ ಮತ್ತೊಂದು ಕೃಷ್ಣಮೃಗ ಬಲಿ

07 SDLP 02
Published on

ಶಿಡ್ಲಘಟ್ಟ : ಬೇಸಿಗೆಯ ಬಿರು ಬಿಸಿಲಿನಿಂದಾಗಿ ಕುಡಿಯುವ ನೀರು ಅರಸಿ ಗ್ರಾಮಗಳ ಬಳಿ ಬರುತ್ತಿರುವ ಕೃಷ್ಣಮೃಗಗಳು ನಾಯಿಗಳ ದಾಳಿಗೆ ತುತ್ತಾಗುತ್ತಿವೆ. ಒಂದೇ ವಾರದಲ್ಲಿ ತಾಲೂಕಿನಲ್ಲಿ ಎರಡು ಕೃಷ್ಣಮೃಗಗಳು ಬಲಿಯಾಗಿವೆ.

ಕಳೆದ ಸೋಮವಾರ ತಾಲೂಕಿನ ವೈ.ಹುಣಸೇನಹಳ್ಳಿಯಲ್ಲಿ ನಾಯಿಗಳ ದಾಳಿಗೊಳಗಾದ ಕೃಷ್ಣಮೃಗವನ್ನು ಗ್ರಾಮಸ್ಥರು ರಕ್ಷಿಸಲು ಯತ್ನಿಸಿದರಾದರೂ ಲಕಾರಿಯಾಗಿರಲಿಲ್ಲ. ಬುಧವಾರ ಪಲಿಚೇರ್ಲು ಅರಣ್ಯದಿಂದ ಗ್ರಾಮದ ಬಳಿ ಬಂದಿದ್ದ ಕೃಷ್ಣಮೃಗವು ನಾಯಿಗಳ ದಾಳಿಗೆ ತುತ್ತಾಗಿದ್ದು, ಮೃತಪಟ್ಟ ಕೃಷ್ಣಮೃಗವನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಬೇಸಿಗೆಯಲ್ಲಿ ಈ ಹಿಂದೆ ಅರಣ್ಯ ಅಧಿಕಾರಿಗಳು ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡುತ್ತಿದ್ದರು, ಆದರೆ ಅದು ಇಂದು ಮರೆಯಾಗಿರುವುದೇ ಕೃಷ್ಣಮೃಗಗಳ ಬಲಿಗೆ ಕಾರಣವಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದು, ಪ್ರಾಣಿಗಳಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡುವುದು ತುರ್ತಾಗಿ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ 33 ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಕಳೆದ ವರ್ಷ ಈ ಅವಧಿಗೆ ಹೋಲಿಸಿದರೆ ತುಸು ಹೆಚ್ಚಿದೆ. ಪಕ್ಷಿಗಳಷ್ಟೇ ಅಲ್ಲದೆ, ಮಂಗಗಳು, ನಾಯಿ, ಬೆಕ್ಕು, ದನಕರುಗಳೂ ಬಿಸಿಲ ಧಗೆಗೆ ತತ್ತರಿಸುತ್ತಿವೆ.

ಹೀಗೆ ಮಾಡಿ......:  ಮನೆಯ ಮುಂಭಾಗದಲ್ಲಿ ಅಥವಾ ತಾರಸಿಯ ಮೇಲೆ ಪಾತ್ರೆಯಲ್ಲಿ ನೀರು ತುಂಬಿಸಿಡಿ. ಪ್ರತಿ ರಸ್ತೆಯ ಒಂದು ಬದಿಯಲ್ಲಿ ಸಣ್ಣದೊಂದು ತೊಟ್ಟಿ ಇಟ್ಟು ನೀರು ತುಂಬಿಸಿ. ಈ ನೀರನ್ನು ಪ್ರತಿ ದಿನ ತಪ್ಪದೇ ಬದಲಿಸಿ. ಮನೆಯ ಬಳಿ ಪಕ್ಷಿಗಳು ವಿಶ್ರಾಂತಿ ಪಡೆಯಲು ಬಿದಿರಿನ ಗೂಡು ತೂಗುಹಾಕಿ. ಪಕ್ಷಿಗಳಿಗೆ ಆಹಾರಕ್ಕಾಗಿ ಮನೆಯ ಹೊರಗೆ ಕಾಳುಗಳನ್ನು ಹಾಕಿ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net