ನಾಯಿ ಕಡಿತಕ್ಕೆ ತಪ್ಪದೇ ಲಸಿಕೆ ಪಡೆಯಿರಿ

Published on

ಬಳ್ಳಾರಿ : ನಾಯಿ ಕಡಿದ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ತಪ್ಪದೇ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಿ. ಕೆ. ಮರಿಯಂಬಿ ಹೇಳಿದರು.
ನಗರದ ಡಿಎಚ್‌ಒ ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದಡಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ರೇಬಿಸ್ ಗಡಿಗಳನ್ನು ಮೀರಿ ಮುಂದುವರೆಯೋಣ ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಆಯೋಜಿಸಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. 2030ರ ವೇಳೆಗೆ ನಾಯಿ ಕಡಿತದ ಮೂಲಕ ಹರಡುವ ರೇಬಿಸ್ ಖಾಯಿಲೆಯಿಂದ ಸಂಭವಿಸುವ ಸಾವಿನ ಸಂಖ್ಯೆಯನ್ನು ಶೂನ್ಯ ಪ್ರಮಾಣಕ್ಕಿಳಿಸುವ ಗುರಿಯನ್ನು ಸಾಧಿಸಲು ಕ್ರಿಯಾ ಯೋಜನೆಗೆ ವಿಶ್ವದಾದ್ಯಂತ ಚಾಲನೆ ನೀಡಲಾಗಿದೆ. ಕರ್ನಾಟಕ ಸೇರಿದಂತೆ ಭಾರತ ದೇಶವು ಇದೇ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿದೆ ಎಂದರು. ಪ್ರಸ್ತುತ ಜಿಲ್ಲೆಯಲ್ಲಿ 10 ಆ್ಯಂಟಿ ರೇಬಿಸ್ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಾಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ವಿನೋದ ಕುಮಾರ ಮಾತನಾಡಿ, ಪಶುವೈದ್ಯಕೀಯ ಇಲಾಖೆಯಿಂದ ಮುಂದಿನ ದಿನಗಳಲ್ಲಿ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಕ್ಯಾಂಪೇನ್ ಮೋಡ್‌ನಲ್ಲಿ ಬೀದಿ ಮತ್ತು ಸಾಕು ನಾಯಿಗಳಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನಾಯಿಗಳ ಸಾಕಾಣಿಕೆ ಮಾಡಿಕೊಂಡಿರುವ ಮಾಲೀಕರು ತಪ್ಪದೇ ನಾಯಿಗಳಿಗೆ ಲಸಿಕೆ ಹಾಕಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net