ನಾಯಿ ಕಚ್ಚಿದರೆ ರೇಬಿಸ್ ಚುಚ್ಚುಮದ್ದು ತುರ್ತಾಗಿ ಕೊಡಿಸಿ

23ark1
ಅರಕಲಗೂಡು ಪಪಂ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ತಾಲೂಕು ಅರೋಗ್ಯಧಿಕಾರಿ ಡಾ.ಪುಷ್ಪ್ಪಲತಾ ಮಾತನಾಡಿದರು. ಪಪಂ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಇತರರಿದ್ದರು.
Published on

ಅರಕಲಗೂಡು: ರೇಬಿಸ್ ಕಾಯಿಲೆ ವೈರಾಣುವಿನಿಂದ ಹರಡುವ ಸೋಂಕಾಗಿದೆ. ನಾಯಿ ಕಚ್ಚಿದ ಕೂಡಲೇ ಆ ಜಾಗವನ್ನು ನೀರಿನಿಂದ ಸ್ವಚ್ಚಗೊಳಿಸಿ, ಆಸ್ಪತ್ರೆಗೆ ಕರೆದೊಯ್ದು ರೇಬಿಸ್ ಚುಚ್ಚು ಮದ್ದು ಕೊಡಿಸುವುದನ್ನು ತುರ್ತಾಗಿ ನಿರ್ವಹಿಸಬೇಕು ಎಂದು ತಾಲೂಕು ಆರೋಗ್ಯಧಿಕಾರಿ ಡಾ.ಪುಷ್ಪ್ಪಲತಾ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2027ರ ವೇಳೆಗೆ ಯಾವುದೇ ವ್ಯಕ್ತಿ ನಾಯಿ ಕಚ್ಚುವ ಕಾರಣಕ್ಕೆ ಮರಣ ಹೊಂದಬಾರದು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದ್ದು, ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಈ ಕುರಿತು ಸೂಕ್ತ ಮಾಹಿತಿ ತಲುಪಬೇಕು ಎಂದರು.

ನಾಯಿ ಕಚ್ಚಿದ ತಕ್ಷಣ ಆ ಜಾಗವನ್ನು ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬರಬೇಕು. ಸ್ವಚ್ಛಗೊಳಿಸದಿದ್ದರೆ ವೈರಣು ರಕ್ತದಲ್ಲಿ ಸೇರಿ ಮೆದುಳಿಗೆ ಹೋದರೆ ಉಸಿರಾಟ ಮತ್ತಿತರ ಸಮಸ್ಯೆ ಉಂಟಾಗುತ್ತದೆ. ಕಚ್ಚಿದ ಜಾಗಕ್ಕೆ ಮಣ್ಣು, ಸುಣ್ಣ ಯಾವುದನ್ನೂ ಹಚ್ಚದೆ ಆಸ್ಪತ್ರೆಗೆ ಕರೆತರಬೇಕು. ದಿನದ 24 ಗಂಟೆಯೂ ಚುಚ್ಚುಮದ್ದು ನೀಡಲಾಗುವುದು ಎಂದು ಹೇಳಿದರು.

ಮನುಷ್ಯನ ಗಾಯದ ಮೇಲೆ ನಾಯಿಯ ಜೊಲ್ಲು ಬಿದ್ದರೂ ರೇಬಿಸ್ ಚುಚ್ಚುಮದ್ದು ಹಾಕಿಸಬೇಕು. ಸಾಕು ನಾಯಿಗೂ ರೇಬಿಸ್ ಚುಚ್ಚುಮದ್ದು ಕೊಡಿಸಿ ಬೇರೆಯವರಿಗೆ ತೊಂದರೆ ನೀಡದಂತೆ ಸಾಕಬೇಕು. ಅಯೋಡಿನ್‌ಯುಕ್ತ ಉಪ್ಪನ್ನು ಬಳಸಬೇಕು ಎಂದು ತಿಳಿಸಿದರು.

ಸೋಂಕಿರುವ ಪ್ರಾಣಿಗಳ (ನಾಯಿ ಶೇ.98, ಬೆಕ್ಕು 2, ನರಿ, ಮಂಗುಸ್, ಕುದುರೆ, ಹಸು, ಕುರಿ, ಟಗರು ಶೇ.1) ಜೊಲ್ಲಿನ ಸಂಪರ್ಕದಿಂದ ಚರ್ಮ ನೆಕ್ಕುವುದರಿಂದ, ಪರಚುವಿಕೆಯಿಂದ ಕಡಿತದಿಂದಲೂ ಹರಡುತ್ತದೆ ಎಂದರು. ಪಪಂ ಅಧ್ಯಕ್ಷೆ ಶಾರದ ಪೃಥ್ವಿರಾಜ್, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net