ನಾಯಕರ ನಡೆಗೆ ಜಿಟಿಡಿ ಬೇಸರ

CTD SAHAKAR SPATAHA.....
Published on

ಚಿತ್ರದುರ್ಗ: ಗ್ರಾಮೀಣರು, ರೈತರ ಸಂಜೀವಿನಿಯಾಗಿರುವ ಸಹಕಾರಿ ಕ್ಷೇತ್ರ, ರಾಜಕಾರಣಕ್ಕೆ ನಾಯಕರನ್ನೂ ಕೊಟ್ಟಿದೆ. ಆದರೆ ಈ ಕ್ಷೇತ್ರದಿಂದ ಬೆಳೆದವರು, ಏರಿದ ಏಣಿಯನ್ನು ಒದೆಯುವಂತೆ, ಸಹಕಾರಿ ಕ್ಷೇತ್ರದ ಅಭಿವೃದ್ಧಿ ಮರೆಯುತ್ತಿದ್ದಾರೆಂದು ಶಾಸಕ, ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತಿತರ ರಾಜ್ಯ, ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ, ನಗರದ ಶ್ರೀರಾಮ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಸಹಕಾರ ವಾರ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಸಹಕಾರ ಕ್ಷೇತ್ರವು ಭಾರತದ ಆರ್ಥಿಕತೆಯ ಹೆಬ್ಬಾಗಿಲು ಎಂದಿದ್ದರು. ಗ್ರಾಪಂ, ಶಿಕ್ಷಣ ಸಂಸ್ಥೆ ಹಾಗೂ ಸಹಕಾರಿ ಸಂಸ್ಥೆ ಒಂದು ಗ್ರಾಮದಲ್ಲಿ ಉತ್ತಮವಾಗಿರಬೇಕೆಂದು ಗಾಂಧೀಜಿ ಬಯಸಿದ್ದರು. 1856ರಲ್ಲಿ ಲಂಡನ್‌ನಲ್ಲಿ ಆರಂಭವಾದ ಸಹಕಾರ ಚಳವಳಿ ಇಂದು ವಿಶ್ವಾದ್ಯಂತ ಬೆಳೆದಿದೆ ಎಂದರು.

ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತ 5540 ಕೋಟಿ ರೂ.ಗಳಿಂದ 2340 ಕೋಟಿ ರೂ.ಗೆ ಕುಸಿದಿದೆ. 27 ಸಾವಿರ ಕೋಟಿ ರೂ. ಠೇವಣಿ ಮೊತ್ತದಲ್ಲಿ ಸಾಲ ಕೊಡುವಂತಾಗಿದೆ. ಜಾಗತೀಕರಣದಿಂದಾಗಿ ಸಹಕಾರಿ ಕ್ಷೇತ್ರ ತತ್ತರಿಸಿತ್ತು. ರೈತರಿಗೆ ಸಕಾಲದಲ್ಲಿ ಸಾಲ ಕೊಡಬೇಕಾದರೆ ಕ್ಷೇತ್ರ ಬಲಗೊಳ್ಳಬೇಕು. ಸರ್ಕಾರದ ಹಸ್ತಕ್ಷೇಪ ಇರಕೂಡದು, ಆದರೆ ಬೆಂಬಲವಿರಬೇಕು.

ಮೊದಲು ಸಹಕಾರಿ ಚುನಾವಣೆಗಳಿಗೆ ಒಂದು ರೂ. ಬೇಕಾಗಿರಲಿಲ್ಲ, ಆದರೆ ಈಗ ಲಕ್ಷಾಂತರ ರೂ. ಖರ್ಚಾಗುತ್ತಿದೆ. ಮಹಿಳೆಯರೂ ಸದಸ್ಯರಾಗಬೇಕು, ಸಹಕಾರಿಗಳು ಉಳಿತಾಯದ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ. ಸುಧಾಕರ್ ಸಹಕಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿಶ್ವದಲ್ಲೇ ಭಾರತ ಅತಿ ಹೆಚ್ಚು ಸಹಕಾರಿ ಸಂಸ್ಥೆಗಳನ್ನು ಹೊಂದಿದೆ. 8.50 ಲಕ್ಷ ಸಂಸ್ಥೆಗಳಲ್ಲಿ 100 ಕೋಟಿ ಸದಸ್ಯರಿದ್ದಾರೆ. ಬಡತನ ನಿವಾರಣೆಯಲ್ಲಿ ಸಹಕಾರದ ಪಾತ್ರ ಹಿರಿದಾಗಿದೆ. ತಂತ್ರಜ್ಞಾನದ ಸಮರ್ಥ ಬಳಕೆಯೊಂದಿಗೆ ಸೊಸೈಟಿಗಳ ದಕ್ಷತೆ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.

ಸೊಸೈಟಿಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿದೆ. ನಬಾರ್ಡ್ ರಿಫೈನಾನ್ಸ್ ಮೊತ್ತ ಕಡಿತಗೊಳಿಸಿದ್ದು, ಇದನ್ನು ಹೆಚ್ಚಿಸುವ ಂತೆ ಸಿಎಂ, ಕೇಂದ್ರ ಹಣಕಾಸು ಸಚಿವರು, ಪ್ರಧಾನಿ ಹಾಗೂ ನಬಾರ್ಡ್‌ಗೆ ಪತ್ರ ಬರೆದಿದ್ದಾರೆ. ನೆರವು ಕಡಿತ ಗೊಳಿಸಿರುವುದು ರೈತರಿಗೆ ಬಹು ದೊಡ್ಡ ಪೆಟ್ಟು ಬಿದ್ದಂತಾಗಿದೆ ಎಂದು ತಿಳಿಸಿದರು.

ಪಕ್ಷಾತೀತವಾಗಿ ನಬಾರ್ಡ್ ನೆರವಿನ ಹೆಚ್ಚಳಕ್ಕೆ ಒತ್ತಾಯಿಸಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ 70300 ರೈತರಿಗೆ 700 ಕೋಟಿ ರೂ. ಕೃಷಿ, ಅಭಿವೃದ್ಧಿ ಸಾಲ ನೀಡಿದೆ. ಇನ್ನೂ ಹೆಚ್ಚಿನ ರೈತರು ಸಾಲಕ್ಕೆ ಬೇಡಿಕೆ ಇಟ್ಟಿದ್ದಾರೆ. ನಬಾರ್ಡ್ ನೆರವು ದೊರೆತರೆ ಇನ್ನೂ ಹೆಚ್ಚಿನ ರೈತರಿಗೆ ಆರ್ಥಿಕ ಸಹಾಯ ಒದಗಿಸಬಹುದಾಗಿದೆ ಎಂದರು.

ವಸ್ತು ಪ್ರದರ್ಶನ ಉದ್ಘಾಟಿಸಿದ ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ, ಕೇಂದ್ರದ ಸಹಕಾರ ಸಚಿವ ಅಮಿತ್ ಷಾ, ದೇಶದ ಸಹಕಾರಿ ಕ್ಷೇತ್ರವನ್ನು ವಿಶ್ವದಲ್ಲೇ ನಂ. 1 ಮಾಡುವ ಗುರಿ ಹೊಂದಿದ್ದಾರೆ. ಕೇಂದ್ರವು ಇದಕ್ಕೆಂದೇ ಪ್ರತ್ಯೇಕ ಸಚಿವಾಲಯವನ್ನೇ ಆರಂಭಿಸಿದೆ. ಗ್ರಾಮೀಣ ಮಟ್ಟದಲ್ಲಿ ಸಹಕಾರಿ ಸಂಸ್ಥೆಗಳಿಗೆ ಪೆಟ್ರೋಲ್, ಅಡುಗೆ ಅನಿಲ ಸಿಲಿಂಡರ್ ಮಾರಾಟಕ್ಕೆ ಅನುಮತಿ ಕೊಡಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಸಹಕಾರಿ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರಿಂದ ರಾಜ್ಯದಲ್ಲಿ ಈ ಚಳವಳಿಗೆ ಚಾಲನೆ ಸಿಕ್ಕಿದೆ. ಹಿಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಅವರಿಂದಾಗಿ ಸೊಸೈಟಿಗಳಿಂದು ಆರ್ಥಿಕ ಸದೃಢತೆಯತ್ತ ಸಾಗಿವೆ. ಶೇ. 50 ಪ್ರಮಾಣದಲ್ಲಿ ಮಹಿಳೆಯರು ಸದಸ್ಯರಾಗಬೇಕು. ರೈತರ ಸಂಜೀವಿನಿಯಾಗಿರುವ ಕ್ಷೇತ್ರ ಬೆಳೆಯಬೇಕು. ಇದಕ್ಕೆ ರಾಜಕೀಯದ ಕಮಟುವಾಸನೆ ಬಡಿಯಬಾರದು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳದ ಅಧ್ಯಕ್ಷ ವೆಂಕಟರಾವ್ ನಾಡಗೌಡ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ. ದ್ಯಾಮಣ್ಣ ಸ್ವಾಗತಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಬಿ. ಮಂಜುನಾಥ್, ಎಂ.ಡಿ. ಇಲ್ಯಾಸ್‌ಉಲ್ಲಾ ಷರೀಫ್, ಎಸ್.ಆರ್. ಲಕ್ಷ್ಮೀಕಾಂತ್ ರೆಡ್ಡಿ, ಜಿ.ಇ. ಅಜ್ಜಪ್ಪ, ಎನ್. ಗಂಗಣ್ಣ, ಮಾಧುರಿ ಗಿರೀಶ್, ಬಿ.ಸಿ. ಸಂಜೀವ್‌ಮೂರ್ತಿ, ಕೆ.ಅನಂತ್.

ಎಚ್.ಎಂ. ಮಂಜುನಾಥ್, ರಘುರಾಮ ರೆಡ್ಡಿ, ರೇವಣಸಿದ್ದಪ್ಪ, ವೀರಭದ್ರ ಬಾಬು, ಪ್ರತಾಪ್ ಸಿಂಹ, ಮಹೇಶ್, ಜಗನ್ನಾಥ್, ಕೆ. ಜಗಣ್ಣ, ಎಚ್.ಎಂ. ತಿಪ್ಪೇಸ್ವಾಮಿ, ಮಹಾಂತೇಶ್, ಎನ್. ರಂಗಪ್ಪ, ಉದಯ ಕುಮಾರ್, ಮಂಜುನಾಥ್, ಹನುಮಂತರಾಯ, ಶ್ರೀನಿವಾಸ್‌ಬಾಬು, ದೇವರಾಜು, ಜಿ.ಸಿ. ರೆಡ್ಡಿ, ಅಶ್ವಥನಾರಾಯಣ, ಜಿ.ಬಿ. ಶೇಖರ್, ತಿಪ್ಪೇಸ್ವಾಮಿ ಮತ್ತಿತರ ಸಹಕಾರಿ ಧುರೀಣರು, ಕೆ.ಎಸ್. ನವೀನ್, ರವೀಂದ್ರ ಇತರ ಅಧಿಕಾರಿಗಳಿದ್ದರು.

ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ 6 ಸಹಕಾರಿಗಳು ಹಾಗೂ 6 ಸಹಕಾರಿ ಸಂಘಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net