ನಾಯಕತ್ವ ರೂಪಿಸುವ ಶಕ್ತಿ ಸ್ಕೌಟ್ಸ್, ಗೈಡ್ಸ್‌ಗಿದೆ

SRS
Published on

ಚಿತ್ರದುರ್ಗ: ಮಾನವೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ದಾರಿ ಎಡೆಗೆ ಕೊಂಡೊಯ್ಯುವ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕತ್ವ ರೂಪಿಸಲು ಸಹಕಾರಿಯಾಗಿದೆ ಎಂದು ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಕಾಲೇಜು, ಪಪೂ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯಿಂದ ಎಸ್‌ಆರ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಮಟ್ಟದ ರೋವರ್ಸ್‌ ಮತ್ತು ರೇಂಜರ್ಸ್‌ ಲೀಡರ್ಸ್‌ಗಳಿಗಾಗಿ ಮಂಗಳವಾರ ನಡೆದ ಒಂದು ದಿನದ ಆರಂಭಿಕ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಭಾರತದಲ್ಲಿ ಕೋಟ್ಯಂತರ ವಿದ್ಯಾರ್ಥಿಗಳು ಇದ್ದಾರೆ. ಆದರೆ, ಶಿಕ್ಷಕರ ಪ್ರಮಾಣ ಕಡಿಮೆ ಇದೆ. ಹೀಗಿರುವಾಗ ಸ್ಕೌಟ್ಸ್ ಮತ್ತು ಗೈಡ್ಸ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಎನ್‌ಸಿಸಿ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಕೆಲಸವಾಗಲು ಸಾಧ್ಯವಿಲ್ಲ. ಸರ್ಕಾರಿ ಆದೇಶ, ಆಜ್ಞೆಯಿಂದಲೂ ಆಗುವುದಿಲ್ಲ. ಶಿಕ್ಷಕರು ತರಬೇತಿ ಪಡೆದು ಮಕ್ಕಳನ್ನು ತಯಾರು ಮಾಡಿದಾಗ ಮಾತ್ರ ಸಫಲವಾಗಲು ಸಾಧ್ಯ ಎಂದು ತಿಳಿಸಿದರು.

ರಾಷ್ಟ್ರದ ಪ್ರಗತಿಗೆ ಪ್ರತಿ ಮನೆಯಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿರಬೇಕೆಂದು ಮಹಾತ್ಮ ಗಾಂಧಿಜೀ ಹೇಳಿದ್ದು, ಆ ನಿಟ್ಟಿನಲ್ಲಿ ಸಂಖ್ಯೆ ದ್ವಿಗುಣ, ತ್ರಿಗುಣ ಆಗುವಲ್ಲಿ ಶ್ರಮಿಸಲಾಗುತ್ತಿದೆ. ಸಂಸ್ಥೆ ಬದುಕಿನ ಕಲೆ ಹೇಳಿಕೊಡುವ ಧ್ಯೇಯ ಹೊಂದಿದ್ದು, ಜೀವನದ ಸಂಗಾತಿಯಾಗಿ ಬದುಕನ್ನೇ ಬದಲಿಸಲಿದೆ ಎಂದು ಸಲಹೆ ನೀಡಿದರು.

ಪ್ರಧಾನಿ ಮೆಚ್ಚುಗೆ: ಕರೋನಾ ವೇಳೆ ಸಂಸ್ಥೆಯಲ್ಲಿನ ಎಲ್ಲರ ಸಹಕಾರದಿಂದ 1 ಕೋಟಿ ಮಾಸ್ಕ್, 10 ಲಕ್ಷ ಮಂದಿಗೆ ಆಹಾರ ವಿತರಿಸಲಾಯಿತು. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಶಿಕ್ಷಣ ಇಲಾಖೆಗೆ ಅಗತ್ಯ ಸಹಕಾರ ನೀಡಲಾಯಿತು. 15 ಲಕ್ಷ ಮಣ್ಣಿನ ಗಣಪತಿ ನಿರ್ಮಾಣ ಆಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯವೈಖರಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸ್ಮರಿಸಿದರು.

ಲಿಂಗಾರೆಡ್ಡಿ ಅವರು ನಮ್ಮ ಸಂಸ್ಥೆ ಚಿತ್ರದುರ್ಗ ಜಿಲ್ಲೆಯಲ್ಲಿ ಮುನ್ನಡೆಸುತ್ತಿದ್ದು, ಚಿತ್ರದುರ್ಗ-ದಾವಣಗೆರೆ ಜಿಲ್ಲೆಯನ್ನು ಪ್ರಥಮ ಸ್ಥಾನದತ್ತ ಕೊಂಡೊಯ್ಯಲು ಪ್ರಯತ್ನಿಸಬೇಕು. ಉದ್ಯಮ ಬಿಟ್ಟು ಶಿಕ್ಷಣ ಕ್ಷೇತ್ರಕ್ಕೂ ಬಂದಿದ್ದು, ಇದರಲ್ಲಿ ಬಹಳ ದೊಡ್ಡ ಬದಲಾವಣೆ ಆಗುತ್ತಿದೆ. ಪ್ರಸ್ತುತ ದಿನಗಳಲ್ಲಿ ನಡೆಸುವುದು ಕಷ್ಟವಾಗಿದ್ದು, ಆವಿಷ್ಕಾರಗಳ ಮೂಲಕ ಮುನ್ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಗೀತಗಾಯನ ಕಾರ್ಯಕ್ರಮ ನಡೆಸಿದ್ದು, ಜಿಲ್ಲಾ ಹಂತದಿಂದ ರಾಜ್ಯಮಟ್ಟಕ್ಕೆ ಅನೇಕರು ಆಯ್ಕೆಯಾಗಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚಿತ್ರದುರ್ಗದಲ್ಲೇ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಎಚ್‌ಕ್ಯೂಸಿ ಜಿ.ಎಸ್.ಉಜ್ಜಿನಪ್ಪ, ವಯಸ್ಕ ಸಂಪನ್ಮೂಲ ರಾಜ್ಯ ಆಯುಕ್ತ ಚಿನ್ನಸ್ವಾಮಿ ರೆಡ್ಡಿ, ಗೈಡ್ಸ್ ರಾಜ್ಯ ಆಯುಕ್ತೆ ಗೀತಾ ನಟರಾಜ್, ರೇಂಜರ್ಸ್‌ ಲೀಡರ್ ಜ್ಯೋತಿ, ರೋವರ್ಸ್‌ ಸ್ಕೌಟ್ ಲೀಡರ್ ರಾಜೇಶ್ ಅವಲಕ್ಕಿ, ಎ.ಡಿ.ಸಿ.ಪ್ರಶಾಂತ್, ಎಚ್‌ಕ್ಯೂಸಿ ಸತ್ಯನಾರಾಯಣ ನಾಯ್ಡು, ಖಜಾಂಚಿ ಎ.ಬಿ.ಸಿ.ಅನ್ವರ್, ಸಹ ಕಾರ್ಯದರ್ಶಿ ಡಾ.ರಹಮತ್‌ವುಲ್ಲಾ, ಬಿಇಒ ಎಸ್.ನಾಗಭೂಷಣ್, ನೋಡಲ್ ಅಧಿಕಾರಿ ಎಚ್.ಟಿ.ಎಸ್.ತಿಪ್ಪೇಸ್ವಾಮಿ, ಪರಮೇಶ್, ಗದಗಿನ ಪೂಜಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net