

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ ವಿಶ್ವಸ್ಥ ಮಂಡಳಿ ಅಡಿಯಲ್ಲಿ ಮುಂಬೈನ ಫೋರಮ್ ಆಫ್ ಫ್ರೀ ಎಂಟರಪ್ರೖೆಸಿಸ್ ಎಂ.ಆರ್.ಪೈ. ಫೌಂಡೇಷನ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರ ಮಂಗಳವಾರ ಸಮಾರೋಪಗೊಂಡಿತು.
ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಕೆಸಿಸಿಐ ಅಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ವಿಶ್ವಸ್ಥ ಮಂಡಳಿಯ ಚೇರ್ಮನ್ ವಿನಯ ಜವಳಿ ಅವರು, ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದು ಸಮರ್ಪಕವಾಗಿ, ಸಂದೇಶ ತಲುಪಿಸುವಂತಿರಬೇಕು. ಯಾರು ಭಾಷಣ ಕಲೆ ಕರಗತ ಮಾಡಿಕೊಳ್ಳುತ್ತಾರೋ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ಉಪಾಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಭವಿಷ್ಯದಲ್ಲಿ ಉತ್ತಮ ಉದ್ಯೋಗಪತಿಗಳಾಗಲು ಈ ತರಬೇತಿಯು ಉಪಯೋಗವಾಗಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ವಿವೇಕ ಪಟಕಿ ಅವರು, ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಹೊರಗೆ ತರುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.
ರಾಜೀವ ಲವ್ ಅವರು ಮಾತನಾಡಿ, ಪ್ರಾರಂಭದಲ್ಲಿ ಇದ್ದ ಹಿಂಜರಿಕೆ ಭಾವನೆ ತರಬೇತಿ ನಂತರದಲ್ಲಿ ವಿದ್ಯಾರ್ಥಿಗಳಲ್ಲಿ ಇಲ್ಲ. ಇದನ್ನು ಬೆಳೆಸಿಕೊಂಡು ಹೋಗಬೇಕು ಎಂದರು.
ಶಿಬಿರಾರ್ಥಿಗಳ ಪರವಾಗಿ ರಜತ ಬಡಿಗೇರ, ಮೋಹನ ಇರಕಲ್ಲ, ಆದರ್ಶ ಪೂಜಾರ, ಸಂಭ್ರಮ ಪವಾರ, ಪ್ರೀತಿ ಶಿರೋಳ ಅನಿಸಿಕೆ ಹಂಚಿಕೊಂಡರು. 9 ಶಾಲೆಗಳಿಂದ 42 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಪ್ರೊ. ಸಿ.ಸಿ. ದೀಕ್ಷಿತ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ, ಸದಸ್ಯರಾದ ಜಿ.ಕೆ. ಆದಪ್ಪಗೌಡರ, ನಾಗರಾಜ ಮಗಜಿಕೊಂಡಿ, ಅಶೋಕ ಗಡಾದ, ಸಿದ್ದೇಶ್ವರ ಕಮ್ಮಾರ ಇತರರು ಇದ್ದರು. ಜತೆ ಗೌರವ ಕಾರ್ಯದರ್ಶಿ ಶಂಕರ ಕೋಳಿವಾಡ ವಂದಿಸಿದರು.