

ಕುಶಾಲನಗರ : ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣಗಳನ್ನು ರೂಢಿಸಿಕೊಂಡರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಲೇಖಕ ಭಾರದ್ವಾಜ ಆನಂದತೀರ್ಥ ಹೇಳಿದರು.ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಎಸ್‌ಡಿಎಂಸಿ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘದ ಚಟುವಟಿಕೆ ಹಾಗೂ ಮಕ್ಕಳ ಸಂಸತ್ ಕಲಾಪಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಯಕತ್ವ ಗುಣ ವಿದ್ಯಾರ್ಥಿಗಳ ಜೀವನವನ್ನು ಸದೃಢ ಮಾಡುವುದರ ಜತೆಗೆ ಆರೋಗ್ಯವಂತ ಸಮಾಜವನ್ನೂ ನಿರ್ಮಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಬಿ.ಆರ್. ಕುಮಾರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಹಿಂದೆ ಶ್ರಮ ಅಗತ್ಯವಿದೆ. ವಿದ್ಯಾರ್ಥಿಗಳು ಸಮಯದ ಸದುಪಯೋಗ ಮಾಡಿಕೊಂಡು ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು ಎಂದರು. ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಎಸ್.ಟಿ. ವೆಂಕಟೇಶ್, ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟಸ್ವಾಮಿ, ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಬಿ.ಎನ್. ಪುಷ್ಪಾ ಮಾತನಾಡಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಸನ್ಮಾನ : ನಿವೃತ್ತ ಮುಖ್ಯ ಶಿಕ್ಷಕ ಬಿ.ಆರ್. ಕುಮಾರ್, ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಎಸ್.ಟಿ. ವೆಂಕಟೇಶ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರತಿನಿಧಿ ಪಿ. ನವೀನ್, ಶಿಕ್ಷಕರಾದ ಗೋಪಾಲಕೃಷ್ಣ, ಬಿ.ಡಿ.ರಮ್ಯಾ, ಗೀತಾ, ಶಾಲಾ ನಾಯಕಿ ಸಂಜನಾ ಇತರರು ಇದ್ದರು.