

ಬಳ್ಳಾರಿ : ಜಿಲ್ಲೆ ಹಾಗೂ ನಗರದ ಅಂಗಡಿ ಮುಂಗಟ್ಟುಗಳ ನಾಮಫಲಕ ಹಾಗೂ ಜಾಹೀರಾತು ಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಎಡಿಸಿ ಅವರಿಗೆ ಮನವಿ ಸಲ್ಲಿಸಿದರು.
ಕಸಾಪ ಜಿಲ್ಲಾದ್ಯಕ್ಷ ಡಾ. ನಿಷ್ಠಿರುದ್ರಪ್ಪ ಮಾತನಾಡಿ, ನಗರವು ಸೇರಿದಂತೆ ಜಿಲ್ಲೆಯ ಮಳಿಗೆಗಳ ನಾಮಫಲಕಗಳಲ್ಲಿ ಮಾಲೀಕರು ಅನ್ಯ ಭಾಷೆಗೆ ಪ್ರಾತಿನಿಧ್ಯ ನೀಡಿದ್ದಾರೆ. ನಾಮಕ ಅವಸ್ಥೆ ಎನ್ನುವಂತೆ ಬಹು ಸಣ್ಣ ದಾಗಿ ತೆಳುವಾಗಿ ನಾಮಫಲಕಗಳನ್ನು ಕನ್ನಡದಲ್ಲಿ ಹಾಕಲಾಗಿದೆ. ಅದೇ ರೀತಿ ಜಾಹಿರಾತು ಫಲಕಗಳಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಕಡೆಗಣಿಸಿ ಅನ್ಯ ಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ. ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಮಟ್ಟದಲ್ಲಿ ಸಭೆ ಕರೆದು ಚರ್ಚಿಸಬೇಕು. ಈ ಬಗ್ಗೆ ತಿಂಗಳಲ್ಲಿ ಒಂದು ದಿನ ಜಾಗೃತಿ ಜಾಥ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ದಸ್ತಗಿರಿ ಸಾಬ್ ದಿನ್ನಿ, ಮುದ್ದಟನೂರು ತಿಪ್ಪೆಸ್ವಾಮಿ, ಪುರುಷೋತ್ತಮ ಹಂದಿಹಾಳ್, ಗಂಗಾವತಿ ವೀರೇಶ್, ವಿರೇಂದ್ರ ರಾವಿಹಾಳ್ ಇದ್ದರು.