ನಾಮಫಲಕ ಅಳವಡಿಸಿ ಸಂತಸ

12 HANUR 4
Published on

ಹನೂರು: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಜಯಗಳಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಹನೂರಿನ ಪಕ್ಷದ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ‘ಶ್ರೀ ಎಂ.ಆರ್. ಮಂಜುನಾಥ್, ಶಾಸಕರು ಹನೂರು ವಿಧಾನಸಭಾ ಕ್ಷೇತ್ರ’ ಎಂಬ ನಾಮಫಲಕ ಅಳವಡಿಸಿ ಹರ್ಷ ವ್ಯಕ್ತಪಡಿಸಿದರು.


ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 44,951 ಮತಗಳನ್ನು ಗಳಿಸಿ, 3ನೇ ಸ್ಥಾನವನ್ನು ಪಡೆದುಕೊಂಡಿದ್ದ ಮಂಜುನಾಥ್ ಅವರು ಸೋತಿದ್ದರೂ ನಿರಂತರವಾಗಿ ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಲ್ಲದೆ, ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು, ಇವರ ಕಾರ್ಯವೈಖರಿ ಅರಿತು ಇತರ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದರು.

ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಜನಬೆಂಬಲ ವ್ಯಕ್ತವಾಗಿತ್ತು. ಪಕ್ಷದ ಕಾರ್ಯಕರ್ತರು ಸಹ ಹಗಲು ರಾತ್ರಿಯೆನ್ನದೇ ದುಡಿದಿದ್ದು, ಮಂಜುನಾಥ್ ಗೆಲ್ಲುವುದು ಖಚಿತ ಎನ್ನಲಾಗಿತ್ತು. ಬೆಟ್ಟಿಂಗ್ ಭರಾಟೆಯೂ ಸಹ ಬಲು ಜೋರಾಗಿಯೇ ನಡೆದಿತ್ತು. ಇದರ ಆಧಾರದ ಮೇಲೆ ಕಾರ್ಯಕರ್ತರು ಈ ಮೊದಲೇ ಮಂಜುನಾಥ್ ಶಾಸಕರು ಎಂಬ ನಾಮಫಲಕವನ್ನು ಬರೆಯಿಸಿ ಇಟ್ಟುಕೊಂಡಿದ್ದರು. ಇತ್ತ ಜಯಗಳಿಸಿದ ಸುದ್ದಿ ತಿಳಿಯುತ್ತಿದ್ದಂತೆ ಕಚೇರಿಯಲ್ಲಿ ಈ ಫಲಕವನ್ನು ಅಳವಡಿಸಲಾಯಿತು. ಜತೆಗೆ ಕಚೇರಿಯ ಮೇಲೆ ಜೆಡಿಎಸ್ ಬಾವುಟ ಕಟ್ಟಿ ಕಾರ್ಯಕರ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು.


ಪಟಾಕಿ ಸಿಡಿಸಿ ಸಂಭ್ರಮ: ಮಂಜುನಾಥ್ ಗೆಲುವಿನ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು ಆಯಾ ಗ್ರಾಮಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಅಲ್ಲದೆ ಕಾರ್ಯಕರ್ತರು ಕಚೇರಿಯತ್ತ ದೌಡಾಯಿಸಿದ್ದು, ಮಂಜುನಾಥ್ ಬರುವಿಕೆಗಾಗಿ ಕಾದು ಕುಳಿತಿದ್ದರು. 144 ಸೆಕ್ಷನ್ ಜಾರಿಯಲ್ಲಿದ್ದ ಪರಿಣಾಮ ಪೊಲೀಸರು ಪಟಾಕಿ ಸಿಡಿಸದಂತೆ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು. ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net